ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಐದು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಆಗಸ್ಟ್‌ 17 ಮತ್ತು 18ರಂದು ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಎರಡೂ ದಿನ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು ಎಂದು ಮಾಹಿತಿ ನೀಡಿದೆ.

ಮಳೆ–ಎಲ್ಲಿ, ಎಷ್ಟು?:
ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಸೋಮವಾರ 7 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಇಂಡಿ 5, ಸುಳ್ಯ 3, ಉಡುಪಿ, ಕಾರ್ಕಳ, ಮಡಿಕೇರಿ 2, ಕಾರವಾರ, ಸಂಡೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಯಚೂರು ಮತ್ತು ಕಲಬುರ್ಗಿಯಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಬೀದರ್, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ತಲಾ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. 

ಯಲಬುರ್ಗಾ: ಧಾರಾಕಾರ ಮಳೆ

ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಬಂಡಿಹಾಳ ಮತ್ತು ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೂ ಧಾರಾಕಾರ ಮಳೆ ಸುರಿಯಿತು.

ಗ್ರಾಮದ ಹಳ್ಳ ಭರ್ತಿಯಾಗಿ ರಭಸವಾಗಿ ಹರಿದಿದ್ದರಿಂದ ಸಂಚಾರ ಸ್ಥಗಿತ ಗೊಂಡಿತ್ತು. ಬೇರೆ ಗ್ರಾಮಗಳಿಂದ ಆಗಮಿಸಿದ್ದ ಕೂಲಿ ಕಾರ್ಮಿಕರನ್ನು ಗ್ರಾಮಸ್ಥರು  ಹಗ್ಗಕಟ್ಟಿ ಮತ್ತೊಂದು ದಡಕ್ಕೆ ಸಾಗಿಸಿ ಮನೆಗೆ ಕಳುಹಿಸಿದರು.

ಹುಬ್ಬಳ್ಳಿ, ಶಿವಮೊಗ್ಗ ಸೇರಿ ವಿವಿಧೆಡೆ ಮಳೆ:
ಸೋಮವಾರ ಹೊಸಪೇಟೆ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ಸೋಮವಾರ ಹಲವೆಡೆ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ ಸೇರಿ ವಿವಿಧೆಡೆ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.

ಹುಬ್ಬಳ್ಳಿ ವರದಿ: ಹೊಸಪೇಟೆಯಲ್ಲಿ ಸುರಿದ ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಬಾಗಲಕೋಟೆ ನವನಗರದಲ್ಲಿ ಬಿರುಸಿನ ಮಳೆಯಾಗಿದ್ದು ವಿದ್ಯುತ್ ಪೂರೈಕೆ ಸಂಪೂರ್ಣ ಕಡಿತಗೊಂಡಿದೆ. ಹುಬ್ಬಳ್ಳಿ ನಗರದಲ್ಲಿಯೂ ಉತ್ತಮ, ಧಾರವಾಡ
ದಲ್ಲಿ ತುಂತುರು ಮಳೆಯಾಗಿದೆ. ಗದಗ, ಬೆಳಗಾವಿ ಹಾಗೂ ಶಿರಸಿಯಲ್ಲಿ ಆಗಾಗ ಮಳೆಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು