ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ವ್ಯಕ್ತಿ ಸಾವು, ಬಸ್‌ನಲ್ಲಿದ್ದ ಪ್ರಯಾಣಿಕರ ರಕ್ಷಣೆ

ಕೆರೆ ಏರಿ ಒಡೆದು ನುಗ್ಗಿದ ನೀರು, ಅಪಾರ ಪ್ರಮಾಣದ ಬೆಳೆ ಹಾನಿ
Last Updated 19 ಅಕ್ಟೋಬರ್ 2022, 21:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕಲಬುರ್ಗಿ, ಬೀದರ್, ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ಬುಧವಾರ ಮಳೆಯಾಗಿದ್ದು, ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಸಿಡಿಲಿಗೆ 17 ಜಾನುವಾರು ಮೃತಪಟ್ಟಿವೆ.

ವಿಜಯನಗರ ಜಿಲ್ಲೆಯ ತಾಂಡಾವೊಂದರಲ್ಲಿ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಪರದಾಡಿದರೆ, ತುಮಕೂರು ಜಿಲ್ಲೆಯ ಹಳ್ಳವೊಂದರಲ್ಲಿ ಸಿಲುಕಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಸಂಡೂರು (ಬಳ್ಳಾರಿ ಜಿಲ್ಲೆ): ಮಳೆಯಿಂದಾಗಿ ಮನೆಯ ಗೋಡೆ ಕುಸಿದು, ಗೋಡೆಯ ಪಕ್ಕದಲ್ಲಿ ಮಲಗಿದ್ದ ಸೋಮಶೇಖರ್ (46) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಪಟ್ಟಣದ ಒಂದನೇ ವಾರ್ಡ್‌ನ ಅಂಬೇಡ್ಕರ್ ಕಾಲೊನಿಯಲ್ಲಿ ಬುಧವಾರ ನಸುಕಿನಲ್ಲಿ ಈ ಅವಘಡ ನಡೆದಿದೆ.

ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾ, ಹೆಗ್ಗರಣೆ, ಹಳಿಯಾಳ ಹಾಗೂ ಜೊಯಿಡಾ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕಾರವಾರ, ಶಿರಸಿ, ಭಟ್ಕಳ ಭಾಗದಲ್ಲಿ ಕೆಲ ನಿಮಿಷ ತುಂತುರು ಹನಿಯಿತು. ಬೆಳಗಾವಿಯಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಬೈಲಹೊಂಗಲ, ಗೋಕಾಕದಲ್ಲಿ ಸಾಧಾರಣ ಮಳೆಯಾಗಿದೆ.

ಪ್ರಯಾಣಿಕರ ರಕ್ಷಣೆ:ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದ ಬಳಿ ಬುಧವಾರ ಹಳ್ಳದ ನೀರಿನಲ್ಲಿ ಸಿಲುಕಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸಾರ್ವಜನಿಕರು ರಕ್ಷಿಸಿದರು.ಆಂಧ್ರದ ಹಿಂದೂಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಹಳ್ಳದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಮತ್ತೊಂದು ವಾಹನನದ (ಜೆಸಿಬಿ) ನೆರವಿನೊಂದಿಗೆ ಹಳ್ಳದಿಂದಬಸ್‌ ಹೊರಕ್ಕೆ ಎಳೆದು ತರಲಾಯಿತು.

ಪಾವಗಡ ತಾಲ್ಲೂಕಿನ ಮದ್ದೆ ಗ್ರಾಮದ ದೊಡ್ಡ ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬೈಕ್ ಸವಾರರೊಬ್ಬರನ್ನು ಸಾರ್ವಜನಿಕರು ರಕ್ಷಿಸಿದ್ದಾರೆ.ಮತ್ತೊಂದು ಘಟನೆಯಲ್ಲಿ ಹನುಮಯ್ಯನಪಾಳ್ಯ ಹಳ್ಳದಲ್ಲಿ ಬೈಕ್ ಸಹಿತ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದು, ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿ ಗೌರಿಕೆರೆ ಏರಿ ಒಡೆದು ಸುತ್ತಮುತ್ತಲ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾದ ಬಳಿ ಬುಧವಾರ ಸಿಡಿಲಿಗೆ 10 ಹಸು, 6 ಎತ್ತು ಮತ್ತು ಆಳಂದ ತಾಲ್ಲೂಕಿನ ಮದಗುಣಕಿ ಗ್ರಾಮದಲ್ಲಿ ಒಂದು ಹಸು ಸೇರಿ 17 ಜಾನುವಾರುಗಳು ಮೃತಪಟ್ಟಿವೆ. ಲಕ್ಷ್ಮಣ ನಾಯಕ ತಾಂಡಾದ ಬಳಿ ಮೇಯಲು ಹೋಗಿದ್ದ 16 ಜಾನುವಾರುಗಳು ಮರದ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT