ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಧಾರಾಕಾರ ಮಳೆ; ರಸ್ತೆಗಳು ಜಲಾವೃತ

Last Updated 29 ಮೇ 2021, 21:01 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಶನಿವಾರ ಬೆಳಿಗ್ಗೆಯೂ ಮಳೆ ಮುಂದುವರಿದಿತ್ತು. ಸತತ ಸುರಿದ ಮಳೆಯಿಂದಾಗಿ ಪಂಪ್‌ವೆಲ್ ಫ್ಲೈ ಓವರ್‌ನ ಸರ್ವಿಸ್‌ ರಸ್ತೆ ಜಲಾವೃತಗೊಂಡಿತ್ತು. ಡೊಂಗರಕೇರಿಯ ರಸ್ತೆಗಳಲ್ಲಿ ನೀರು ಹರಿಯಿತು. ಮಧ್ಯಾಹ್ನದ ನಂತರ ಮಳೆ ಬಿಡುವು ನೀಡಿತು.

ಚರಂಡಿಗಳ ಹೂಳು ತೆರವು ಮಾಡದೇ ಇರುವುದರಿಂದ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆ ಬಂದಿತ್ತು. ರಥಬೀದಿ, ಟಿ.ವಿ. ರಮಣ ಪೈ ಹಾಲ್‌ವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು, ನೀರು ಸಂಗ್ರಹವಾಗಿತ್ತು. ಬಿಜೈ, ಕೆ.ಎಸ್‌. ರಾವ್‌ ರಸ್ತೆ, ಕೊಟ್ಟಾರಚೌಕಿ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದವು.

ಶ್ರೀಕಾಂತ್‌ ತಿಂಗಳಾಯ ಅವರಿಗೆ ಸೇರಿದ ಜನಶ್ರೀ ಮೀನುಗಾರಿಕೆ ಬೋಟ್‌ ನೀರಿನಲ್ಲಿ ಮುಳುಗಿದೆ. ಅತ್ತಾವರ ಬಾಬುಗುಡ್ಡೆಯಲ್ಲಿ ಮನೆಯೊಂದು ಕುಸಿದಿದೆ. ಹಲವು ಮನೆಗಳಿಗೆ ನೀರು ನುಗ್ಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮುನ್ನೂರಿನಲ್ಲಿ 10.2, ಕೆರ್ಮಾಳ್‌ನಲ್ಲಿ 10 ಹಾಗೂ ಮಂಗಳೂರು ನಗರದಲ್ಲಿ 9.8 ಸೆಂ.ಮೀ ಮಳೆ ಸುರಿದಿದೆ.

ಉತ್ತಮ ಮಳೆ (ಮಡಿಕೇರಿ ವರದಿ): ಕೊಡಗು ಜಿಲ್ಲೆಯಮಡಿಕೇರಿ, ಕಾಟಕೇರಿ, ಅಪ್ಪಂಗಳ, ಚೆಯ್ಯಂಡಾಣೆ, ಬಕ್ಕ, ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಬಿರುಸಿನ ಮಳೆಯಾಗಿದೆ.

ಸಿಡಿಲು ಬಡಿದು ಮಹಿಳೆ ಸಾವು
ಬಸವನಬಾಗೇವಾಡಿ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಸಿಂಧಗೇರಿ ಗ್ರಾಮದಲ್ಲಿ ಶನಿವಾರ ಸಿಡಿಲು ಬಡಿದು ಮುರಗೆಮ್ಮ ಬಾಬು ಚನ್ನಪಟ್ಟಣ (29) ಮೃತಪಟ್ಟಿದ್ದಾರೆ.

ಸಿಡಿಲು ಬಡಿದು 11 ಮೇಕೆಗಳು ಸಾವು: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹೂವಿನಭಾವಿ ಹಾಗೂ ಹೂಡದಳ್ಳಿ ಗ್ರಾಮದ ಬಳಿ ಜಾಡರ್ ಕೊಳ್ಳದಲ್ಲಿ ಸಿಡಿಲು ಬಡಿದು 11 ಮೇಕೆಗಳು ಸಾವನ್ನಪ್ಪಿವೆ.

ಐದು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮೇ 30ರಂದು ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಪೂರ್ವ ಮುಂಗಾರು ಶುರುವಾಗಿದ್ದು, ಜೂನ್ ಮೊದಲ ವಾರದಲ್ಲಿ ನೈರುತ್ಯ ಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ. ಹಾಗಾಗಿ, ಮುಂದಿನ ಐದು ದಿನಗಳವರೆಗೆ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಮಾಹಿತಿ ನೀಡಿದೆ.

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾನುವಾರ (ಮೇ 30) ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮೇ 3ರಂದು ಮಳೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT