ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವಾಗದ ರಾಜಕಾಲುವೆ ಒತ್ತುವರಿ: ತೀರದ ಬವಣೆ

ನಗರದಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಮಳೆ; ಗುರುವಾರವೂ ಸಂಚಾರ ಅಸ್ತವ್ಯಸ್ತ
Last Updated 20 ಅಕ್ಟೋಬರ್ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಾದ್ಯಂತ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದು, ರಸ್ತೆ, ಬಡಾವಣೆಗಳಿಗೆ ನೀರು ನುಗ್ಗಿದೆ. ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದ ನಗರದ ಪೂರ್ವ ವಲಯದಲ್ಲಿ ಮತ್ತೆ ಸಂಕಷ್ಟ ಎದುರಾಗಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾಟಾಚಾರಕ್ಕೆ ನಡೆದಿರುವುದು ಬಹಿರಂಗವಾಗಿದೆ.

ನಗರದ ಹಲವು ಬಡಾವಣೆಗಳಲ್ಲಿ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿ ನೂರಾರು ಜನರು ಮಳೆ ನೀರನ್ನು ಮನೆಯಿಂದ ಹೊರಹಾಕಲು ರಾತ್ರಿಯಿಡೀ ಪ್ರಯಾಸಪಟ್ಟರು. ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು. ಬುಧವಾರ ಮಧ್ಯರಾತ್ರಿವರೆಗೂ ರಸ್ತೆಗುಂಡಿಗಳ ಜೊತೆಗೆ ಮಳೆ ನೀರೂ ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಗುರುವಾರ ಮಧ್ಯಾಹ್ನದವರೆಗೆ ಶಿವಾನಂದ ವೃತ್ತ, ಆನಂದರಾವ್‌ ವೃತ್ತ ಸೇರಿದಂತೆ ಹಲವು ರಸ್ತೆಗಳಲ್ಲಿ, ಮೇಲ್ಸೇತುವೆಗಳ ಕೆಳಭಾಗದಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು.

ದಕ್ಷಿಣ ವಲಯದ ವಿಜಯನಗರದ ಎ.ಸಿ.ಟಿ. ಕಾಲೊನಿ, ಸ್ಯಾಟಲೈಟ್‌ ಬಸ್‌ಸ್ಟಾಪ್‌, ಬಿಟಿಎಂ ಬಡಾವಣೆಯ ಕೆಎಎಸ್‌ ಕಾಲೊನಿ, ಡಾಲರ್ಸ್ ಕಾಲೊನಿ 5ನೇ ಸೆಕ್ಟರ್, ಪದ್ಮನಾಭನಗರದ ಜೆ.ಎಸ್‌.ಎಸ್‌ ವೃತ್ತ, ದೋಭಿಘಾಟ್‌ ಪ್ರದೇಶಗಳು ಜಲಾವೃತಗೊಂಡಿದ್ದವು. ಸುಮಾರು 10 ಮನೆಗಳಿಗೆ ನೀರು ನುಗ್ಗಿತ್ತು. ಸೌತ್‌ ಎಂಡ್‌, ಬಾಪೂಜಿ ಬಡಾವಣೆ, ಬಿಟಿಎಂ ಬಡಾವಣೆ, ಕೋರಮಂಗಲದಲ್ಲಿ ಮರಗಳು ಧರೆಗುರುಳಿದವು.

ಖಾಸಗಿ ಬಸ್‌ ನಿಲುಗಡೆ: ಬುಧವಾರ ರಾತ್ರಿ ಮಳೆ ಹಾಗೂ ಗುಂಡಿಗಳ ಕಾರಣ ಮೈಸೂರು ರಸ್ತೆಯಲ್ಲಿ ಮಧ್ಯರಾತ್ರಿಯವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ‘ಸ್ಯಾಟಲೈಟ್‌ ಬಸ್‌ ನಿಲ್ದಾಣದ ಮುಂಭಾಗ ಖಾಸಗಿ ಬಸ್‌ಗಳು ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ನಿಂತಿದ್ದರಿಂದ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು. ಪ್ರತಿ ದಿನವೂ ಇಲ್ಲಿ ಖಾಸಗಿ ಬಸ್‌ಗಳಿಂದಲೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಂಚಾರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಾಹನ ಸವಾರರು ದೂರಿದರು.

ಪೂರ್ವ ವಲಯದ ಮಹದೇವಪುರ ಹಾಗೂ ಕೆ.ಆರ್.ಪುರದಲ್ಲಿ ಮಳೆ ನೀರು ಬಡಾವಣೆಗಳಿಗೆ ನುಗ್ಗಿ ಸಂಕಷ್ಟ ಎದುರಾಗಿತ್ತು. ಸೆಪ್ಟೆಂಬರ್‌ ಮೊದಲ ಹಾಗೂ ಎರಡನೇ ವಾರದಲ್ಲಿ ಭಾರಿ ಮಳೆಯಿಂದ ತೊಂದರೆ ಅನುಭವಿಸಿದ್ದ ಈ ಭಾಗದ ಜನರು ಮತ್ತೆ ಅದೇ ರೀತಿ ಕಷ್ಟಕ್ಕೆ ಒಳಗಾದರು. ರಾಜಕಾಲುವೆ ಎಲ್ಲ ಒತ್ತುವರಿಯನ್ನು ತೆರವು ಮಾಡಲಾಗುತ್ತದೆ ಎಂದು ಎಲ್ಲರೂ ಹೇಳಿದ್ದರು. ಆದರೆ, ಈ ತೆರವು ಕಾರ್ಯ ಮೇಲ್ನೋಟಕ್ಕೆ ಮಾತ್ರ ಆಗಿರುವುದು ಮತ್ತೆ ಅದೇ ಪ್ರದೇಶಗಳಲ್ಲಿ ನೀರು ಹರಿದಿರುವುದು ಸಾಬೀತುಪಡಿಸಿದೆ.

ತಡೆಯಾಜ್ಞೆ; ನುಗ್ಗಿದ ನೀರು: ಕಳೆದ ಬಾರಿ ಭಾರಿ ಮಳೆಯಿಂದ ಪೂರ್ಣ ಜಲಾವೃತಗೊಂಡಿದ್ದ ಸರ್ಜಾಪುರ ರಸ್ತೆಯಲ್ಲಿರುವ ರೈನ್‌ಬೊ ಡ್ರೈವ್‌ ಬಡಾವಣೆಯ ಐಷಾರಾಮಿ ವಿಲ್ಲಾಗಳಿಗೆ ಮಳೆ ನೀರು ನುಗ್ಗಿತ್ತು. ರಾಜಕಾಲುವೆ ಒತ್ತುವರಿ ತೆರವು ಮಾಡದಂತೆ ನಿವಾಸಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಯಾವುದೇ ರೀತಿಯ ತೆರವು ಆಗಿರಲಿಲ್ಲ. ಹೀಗಾಗಿ ಬುಧವಾರದ ಭಾರಿ ಮಳೆ ನೀರು ಮತ್ತೆ ಈ ಬಡಾವಣೆಗಳಿಗೆ ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT