ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆ ತಪ್ಪುಗ್ರಹಿಕೆ ನೀಗಿಸುವ ಆರ್‌ಜಿಐಸಿಡಿ

ರೋಗಿಗಳ ಸಂಬಂಧಿಗಳಿಗೆ ಊಟ–ತಿಂಡಿ ಸಮಸ್ಯೆ l ಸಂಸ್ಥೆಯ ಆವರಣದಲ್ಲಿ ಕ್ಯಾಂಟೀನ್ ನಿರ್ಮಿಸಲು ಆಗ್ರಹ
Last Updated 10 ಏಪ್ರಿಲ್ 2022, 19:26 IST
ಅಕ್ಷರ ಗಾತ್ರ

ಬೆಂಗಳೂರು: ‘ಪತಿಯು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದು, ಇಲ್ಲಿಗೆ ಬಂದ ಮೇಲೆ ಸರ್ಕಾರಿ ಆಸ್ಪತ್ರೆ ಬಗೆಗಿನ ತಪ್ಪುಗ್ರಹಿಕೆ ದೂರವಾಗಿದೆ. ಸರ್ಕಾರಿ ಯೋಜನೆಗಳಡಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿತ್ತು’.

ಹೊಸೂರು ರಸ್ತೆ ಬಳಿ ಇರುವ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ (ಆರ್‌ಜಿಐಸಿಡಿ) ಆಸ್ಪತ್ರೆಯ ಬಗ್ಗೆ ಕೆ.ಆರ್. ಮಾರುಕಟ್ಟೆಯ ನಿವಾಸಿ ಆಯಿಷಾ ಅವರ ಮನದ ಮಾತುಗಳಿವು. ರೋಗಿಯ ಸಹಾಯಕ್ಕಾಗಿ ಉಳಿದುಕೊಳ್ಳುವ ಬಂಧುಗಳಿಗೂ ಸ್ನಾನಕ್ಕೆ ಬಿಸಿ ನೀರಿನ ಸೌಲಭ್ಯ ಒದಗಿಸಿರುವ ಬಗ್ಗೆ ಹಾಗೂ ಆಸ್ಪತ್ರೆ ನಿರ್ವಹಣೆಯ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಪಿಎಲ್ ಕುಟುಂಬದವರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಬಿಡುವಿನಲ್ಲಿ ವಿಹರಿಸಲು ಉದ್ಯಾನ, ಔಷಧ ವನವಿದೆ. ಎರಡು ಮಹಡಿಯ ಕಟ್ಟಡದಲ್ಲಿ ವಿಶಾಲವಾದ ವಾರ್ಡ್‌, ಶುದ್ಧ ಕುಡಿಯುವ ನೀರು ಸೇರಿದಂತೆ ವಿವಿಧ ಸೌಕರ್ಯಗಳನ್ನು ಹೊಂದಿರುವ ಈ ಆಸ್ಪತ್ರೆ ಬಗ್ಗೆ ಇಲ್ಲಿ ಚಿಕಿತ್ಸೆ ಪಡೆಯುವ ಬಹುತೇಕ ರೋಗಿಗಳು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಚ್ಛತೆಗೆ ಆದ್ಯತೆ: ‘ಸಂಸ್ಥೆಯ ಆವರಣ, ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ರೋಗಿಗಳಿಗೆ ರಾಗಿ ಮುದ್ದೆ, ಮೊಟ್ಟೆ ಸೇರಿ ಪೌಷ್ಟಿಕ ಊಟವನ್ನೂ ನೀಡಲಾಗುತ್ತಿದೆ. ರೋಗಿಯ ಜತೆಗೆ ಒಬ್ಬರಿಗೆ ಉಳಿಯಲು ಅವಕಾಶವಿದೆ. ಕುಡಿಯಲು ಬಿಸಿ ನೀರೂ ದೊರೆಯುತ್ತದೆ. ವೈದ್ಯರು ಉತ್ತಮವಾಗಿ ಚಿಕಿತ್ಸೆ ಒದಗಿಸುತ್ತಿದ್ದಾರೆ’ ಎಂದು ರೋಗಿಗಳ ಸಂಬಂಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶ್ವಾಸಕೋಶಕ್ಕೆ ಹಾನಿಯಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಈಗ ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ವಾರ್ಡ್‌ಗಳು ಸ್ವಚ್ಛವಾಗಿವೆ. ಸಕಾಲಕ್ಕೆ ಊಟ–ತಿಂಡಿ ಒದಗಿಸಲಾಗುತ್ತಿದೆ’ ಎಂದು ಕಲಬುರಗಿಯ ರೋಗಿಯೊಬ್ಬರು ತಿಳಿಸಿದರು.

‘ಕೋವಿಡ್ ಸೊಂಕಿತರಿಗೆ ಚಿಕಿತ್ಸೆ ಒದಗಿಸುವಾಗ ಅಧಿಕ ಕಾರ್ಯದೊತ್ತಡದಲ್ಲಿ ಕೆಲಸ ಮಾಡಬೇಕಾಯಿತು. ಈಗ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲಸದೊತ್ತಡವೂ ಕಡಿಮೆ ಆಗಿದೆ’ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ತಿಳಿಸಿದರು.

ಈ ಸಂಸ್ಥೆಯು ಕ್ಷಯರೋಗ ಮತ್ತು ಎದೆ ರೋಗಗಳ ಚಿಕಿತ್ಸೆಗೆ ಹೆಸರುವಾಸಿ. ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಲ್ಲದೇ, ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ನಗರದಲ್ಲಿ 2020ರ ಮಾರ್ಚ್‌ನಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದಾಗ ಇಲ್ಲಿಯೇ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು. ‌

ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಂಡಾಗ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಚಿಕಿತ್ಸೆ ನೀಡಲಾಗಿತ್ತು. ಇದರಿಂದಾಗಿ ಎದೆರೋಗಗಳನ್ನು ಎದುರಿಸುತ್ತಿರುವವರಿಗೆ ಚಿಕಿತ್ಸೆ ಸಮಸ್ಯೆಯಾಗಿತ್ತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಕೋವಿಡೇತರ ಚಿಕಿತ್ಸೆಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ.

ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಸಂಸ್ಥೆಯ ಹಿಂಭಾಗತಾತ್ಕಾಲಿಕ ಆಸ್ಪತ್ರೆ (ಮೇಕ್‌ ಶಿಫ್ಟ್) ನಿರ್ಮಿಸಲಾಗಿತ್ತು. 200 ಹಾಸಿಗೆಗಳ ಮೇಕ್‌ ಶಿಫ್ಟ್ ಆಸ್ಪತ್ರೆಯನ್ನೂ ಈಗ ಕೋವಿಡೇತರ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ₹ 200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಯಾವುದೇ ಹೊಸಸೋಂಕು ಕಾಣಿಸಿ ಕೊಂಡರೂ ಚಿಕಿತ್ಸೆ ಒದಗಿಸಲು ಸರ್ಕಾರ ಈ ಸಂಸ್ಥೆಯನ್ನೇ ಆಯ್ಕೆಮಾಡಿದೆ. ಹಿಂದೆ ಸಾರ್ಸ್, ಎಬೋಲಾ, ಎಚ್‌1ಎನ್1, ನಿಫಾ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿಯೂ ಈ ಸಂಸ್ಥೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

‘ಮಿಲ್ಕ್ ಪಾರ್ಲರ್, ಹಣ್ಣಿನ ಅಂಗಡಿ ಅಗತ್ಯ’

ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಊಟ–ತಿಂಡಿ ತಯಾರಿಸಿ, ಒದಗಿಸಲಾಗುತ್ತದೆ.ರೋಗಿಗಳ ಸಹಾಯಕರು ಹೊರಗೆ ಊಟ–ತಿಂಡಿ ಸೇವಿಸಬೇಕು.ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್‌ ಇಲ್ಲದಿರುವುದು ಸಮಸ್ಯೆಯಾಗಿದೆ. ಹೀಗಾಗಿ,ಕ್ಯಾಂಟೀನ್ ನಿರ್ಮಿಸಿ, ರಿಯಾಯಿತಿ ದರದಲ್ಲಿ ಊಟ–ತಿಂಡಿಗಳನ್ನು ಒದಗಿಸಬೇಕು ಎಂಬುದು ರೋಗಿಗಳ ಸಂಬಂಧಿಗಳ ಮನವಿ. ರೋಗಿಗಳಿಗೆ ಹಾಲು–ಹಣ್ಣುಗಳನ್ನು ಒದಗಿಸಲುಮಿಲ್ಕ್ ಪಾರ್ಲರ್ ಹಾಗೂ ಹಣ್ಣಿನ ಅಂಗಡಿ ತೆರೆಯಬೇಕು ಎಂದು ಆಸ್ಪತ್ರೆಗೆ ದಾಖಲಾದವರ ಸಂಬಂಧಿಗಳು ಒತ್ತಾಯಿಸಿದ್ದಾರೆ.

‘ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್ ಇಲ್ಲದಿರುವುದರಿಂದ ಊಟ–ತಿಂಡಿ ಸಮಸ್ಯೆ ಆಗುತ್ತಿದೆ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಕ್ಯಾಂಟೀನ್‌ ಇದೆ. ಅಲ್ಲಿ ಎರಡು ಇಡ್ಲಿಗೆ ₹ 40 ಹಾಗೂ ದೋಸೆಗೆ ₹ 50 ಪಾವತಿಸಬೇಕಾಗುತ್ತದೆ. ದಿನವೊಂದಕ್ಕೆ ಊಟ–ತಿಂಡಿಗೆ ₹ 200 ಕ್ಕೂ ಅಧಿಕ ವೆಚ್ಚ ಆಗುತ್ತಿದೆ. ಆಸ್ಪತ್ರೆಯಲ್ಲಿ ಸಹಾಯಕರೊಬ್ಬರಿಗೆ ಉಚಿತವಾಗಿ ಊಟ–ತಿಂಡಿ ನೀಡಿದರೆ ಅಥವಾ ಕ್ಯಾಂಟೀನ್‌ ನಿರ್ಮಿಸಿ, ರಿಯಾಯತಿ ದರದಲ್ಲಿ ಒದಗಿಸಿದರೆ ಅನುಕೂಲ ಆಗುತ್ತದೆ’ ಎಂದು ರೋಗಿಗಳ ಸಹಾಯಕರು ತಿಳಿಸಿದರು.

‘ಸಹಾಯಕರಿಗೆ ವಿಶ್ರಾಂತಿ ಧಾಮ’

‘ಸಂಸ್ಥೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿ ವ್ಯವಸ್ಥೆಯ ಬಗ್ಗೆ ರೋಗಿಗಳಿಂದ ಹಾಗೂ ಅವರ ಸಹಾಯಕರಿಂದ ಮಾಹಿತಿ ಸಂಗ್ರಹಿಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಸ್ವಚ್ಛತೆ ಮತ್ತು ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.ಎರಡು ಎಕರೆ ಪ್ರದೇಶದಲ್ಲಿ ಮೂರು ಮಹಡಿಯ ವಿಶ್ರಾಂತಿ ಧಾಮ ನಿರ್ಮಿಸಲಾಗುತ್ತಿದೆ. ಇದು ₹ 10 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದ್ದು, ಮೂರು ಮಹಡಿಗಳನ್ನು ಒಳಗೊಳ್ಳಲಿದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಅಲ್ಲಿ ರೋಗಿಗಳ ಸಹಾಯಕರು ಸೇರಿದಂತೆ 250 ಮಂದಿಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಲು ಸಾಧ್ಯ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ಸಹಾಯಕರಿಗೆ ಊಟ ಮಾಡಲು ಆಸ್ಪತ್ರೆ ಒಳಗಡೆ ಕಟ್ಟೆ ನಿರ್ಮಿಸಿ, ವ್ಯವಸ್ಥೆ ಮಾಡಿಕೊಡಲಾಗಿದೆ. ಕ್ಯಾಂಟೀನ್‌ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಕ್ಷಯರೋಗಿಗಳಿದ್ದಾರೆ ಎಂಬ ಕಾರಣಕ್ಕೆ ಕ್ಯಾಂಟೀನ್ ತೆರೆಯಲುಕೆಲವರು ಹಿಂದೇಟು ಹಾಕಿದ್ದಾರೆ. ಕ್ಯಾಂಟೀನ್‌ಗೆ ಸಂಬಂಧಿಸಿ ಮೂರು ನಾಲ್ಕು ಅರ್ಜಿಗಳು ಬಂದಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT