ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ, ಪರಿಷತ್‌: ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ

ಜೈರಾಂ ರಮೇಶ್, ರಾಜೀವ್ ಗೌಡ, ಮುದ್ದಹನುಮೇಗೌಡ ಪ್ರಯತ್ನ
Last Updated 20 ಮೇ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವುದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಶನಿವಾರ ದೆಹಲಿಗೆ ಬರುವಂತೆ ವರಿಷ್ಠರಿಂದ ಕರೆಬಂದಿದ್ದು, ಆಕಾಂಕ್ಷಿಗಳೂ ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ರಾಜ್ಯ ವಿಧಾನಸಭೆಯಿಂದ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್‌ ನಿರಾಯಾಸವಾಗಿ ಪಡೆಯಲಿದೆ. ಹಾಲಿ ಸದಸ್ಯ ಜೈರಾಂ ರಮೇಶ್‌ ಪುನರಾಯ್ಕೆಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸದಂತೆ ರಾಜ್ಯ ಕಾಂಗ್ರೆಸ್‌ನ ಹಲವರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.

ರಾಜ್ಯಸಭೆಯ ಮಾಜಿ ಸದಸ್ಯ ಪ್ರೊ.ಎಂ.ವಿ. ರಾಜೀವ್‌ ಗೌಡ ಎರಡನೇ ಬಾರಿ ಸಂಸತ್ತಿನ ಮೇಲ್ಮನೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಕೂಡ ರಾಜ್ಯಸಭೆ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರ ಎದುರು ಬೇಡಿಕೆ ಇಟ್ಟಿದ್ದಾರೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜತೆ ಚರ್ಚಿಸಿದ ಬಳಿಕವೇ ಕಾಂಗ್ರೆಸ್‌ ಹೈಕಮಾಂಡ್‌ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನ ಲಭಿಸಲಿವೆ. ನಾಲ್ಕನೇ ಸ್ಥಾನಕ್ಕೆ ಜೆಡಿಎಸ್‌ ಎರಡರಲ್ಲಿ ಒಂದು ಪಕ್ಷದ ಜತೆ ಕೈ ಜೋಡಿಸಬೇಕಿದೆ. ಅಂತಿಮವಾಗಿ ಜೆಡಿಎಸ್‌ ನಿರ್ಧಾರವೇ ನಿರ್ಣಾಯಕ ಆಗಿರುವುದರಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್‌ ಯೋಚಿಸಿಲ್ಲ ಎಂದು ಗೊತ್ತಾಗಿದೆ.

ಹತ್ತಾರು ಆಕಾಂಕ್ಷಿಗಳು: ಜೂನ್‌ 14ಕ್ಕೆ ತೆರವಾಗಲಿರುವ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್‌ 3ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಈ ಚುನಾವಣೆಯಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್‌ಗೆ ಸಿಗಲಿದ್ದು, ಹತ್ತಾರು ಆಕಾಂಕ್ಷಿಗಳಿದ್ದಾರೆ. ಜಾತಿ, ಪ್ರಾದೇಶಿಕತೆ, ಹಿರಿತನ ಮತ್ತಿತರ ಅಂಶಗಳ ಆಧಾರದಲ್ಲಿ ಪಕ್ಷದ ವರಿಷ್ಠರನ್ನು ಮನವೊಲಿಸಲು ಆಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ.

ಅಲ್ಲಂ ವೀರಭದ್ರಪ್ಪ, ಆರ್‌.ಬಿ. ತಿಮ್ಮಾಪೂರ ಮತ್ತು ವೀಣಾ ಅಚ್ಚಯ್ಯ ನಿವೃತ್ತಿಯಾಗುತ್ತಿರುವ ಕಾಂಗ್ರೆಸ್‌ ಸದಸ್ಯರು. ಅವರಲ್ಲಿ ಅಲ್ಲಂ ವೀರಭದ್ರಪ್ಪ ಮತ್ತು ಆರ್‌.ಬಿ. ತಿಮ್ಮಾಪೂರ ಮತ್ತೊಂದು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದ ಹಿರಿಯ ಮುಖಂಡ ಎಸ್.ಆರ್‌. ಪಾಟೀಲ ಈಗ ವಿಧಾನಸಭೆಯಿಂದ ನಡೆಯುವ ಚುನಾವಣೆಯಲ್ಲಿ ಮತ್ತೆ ಮೇಲ್ಮನೆ ಪ್ರವೇಶಿಸಲು ಪಟ್ಟು ಹಿಡಿದಿದ್ದಾರೆ. ಟಿಕೆಟ್‌ ನಿರಾಕರಿಸುವ ಸಂದರ್ಭದಲ್ಲಿ ಪಕ್ಷದ ವರಿಷ್ಠರು ನೀಡಿದ್ದ ಭರವಸೆಯನ್ನೇ ಈಗ ನೆನಪಿಸಿ ಟಿಕೆಟ್‌ಗಾಗಿ ಆಗ್ರಹಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌, ಸೂರಜ್‌ ಹೆಗ್ಡೆ ಸೇರಿದಂತೆ ಹಲವರು ಟಿಕೆಟ್‌ಗಾಗಿ ವರಿಷ್ಠರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT