ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಮನವೊಲಿಕೆಗೆ ಜೆಡಿಎಸ್‌ ಕಸರತ್ತು

ರಾಜ್ಯಸಭೆ ಚುನಾವಣೆ: ನಾಲ್ಕನೇ ಸ್ಥಾನಕ್ಕೆ ಪೈಪೋಟಿ ತೀವ್ರ
Last Updated 1 ಜೂನ್ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮನ್ಸೂರ್‌ ಖಾನ್‌ ನಾಮಪತ್ರ ಹಿಂದಕ್ಕೆ ಪಡೆಯಲು ಮನವೊಲಿಸುವ ಸಂಬಂಧ ಜೆಡಿಎಸ್‌ ಗಂಭೀರ ಪ್ರಯತ್ನ
ಗಳನ್ನು ಆರಂಭಿಸಿದೆ. ಒಂದು ವೇಳೆ ಮನ್ಸೂರ್‌ ಖಾನ್‌ ಕಣದಿಂದ ಹಿಂದಕ್ಕೆ ಸರಿದರೆ ಜೆಡಿಎಸ್‌ ಅಭ್ಯರ್ಥಿಗೆ ಹಾದಿ ಸುಗಮವಾಗಲಿದೆ.

ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ನ ದೆಹಲಿ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದಕ್ಕೆ ಪೂರಕವಾಗಿ ಜೆಡಿಎಸ್‌ ಪ್ರಮುಖರಾದ ಟಿ.ಎ.ಶರವಣ, ಬಿ.ಎಂ.ಫಾರೂಕ್‌ ಮತ್ತು ಇತರರು ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಮನವಿ ಮಾಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶರವಣ, ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ರಾಜ್ಯಸಭೆ ಚುನಾವಣೆಯಲ್ಲಿ ಜಾತ್ಯತೀತರು
ಒಗ್ಗಟ್ಟಿನ ಹೋರಾಟ ನಡೆಸಬೇಕು. ಯಾವುದೇ ಕಾರಣಕ್ಕೂ ಬಿಜೆಪಿಗೆ ಗೆಲ್ಲಲು ಅವಕಾಶ ನೀಡಬಾರದು’
ಎಂದರು.

‘ಚರ್ಚಿಸಿಯೇ ನಾಮಪತ್ರ ಸಲ್ಲಿಕೆ’

‘ನಾಮಪತ್ರ ಸಲ್ಲಿಸುವುದಕ್ಕೆ ಮೊದಲೇ ಕಾಂಗ್ರೆಸ್‌ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿದ್ದೆವು. ಆದರೆ, ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ವಿಷಯ ಗೊತ್ತಿರಲಿಲ್ಲ’ ಎಂದು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ದೇವೇಗೌಡರು ಈ ವಿಚಾರವಾಗಿ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆ ನಡೆಸಿದ್ದರು. ಅಲ್ಲಿ ತೀರ್ಮಾನ ಆದ ಬಳಿಕವೇ ನಾನು ನಾಮಪತ್ರ ಸಲ್ಲಿಸಿದೆ. ಕಾಂಗ್ರೆಸ್‌ನವರು ಮೊದಲೇ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಂಗ್ರೆಸ್‌ನವರು ಸಣ್ಣ ಸುಳಿವು ಕೊಡದೇ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದರು.

ಕಾಂಗ್ರೆಸ್‌ ನಡೆ ಬಂಡೆಪ್ಪ ಟೀಕೆ: ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಎರಡನೇ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲದಿದ್ದರೂ ನಾಮಪತ್ರ ಸಲ್ಲಿಸಿದ್ದು, ಇದರಿಂದ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಸಹಕಾರವಾಗಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ ಟೀಕಿಸಿದರು.

ದೇವೇಗೌಡರು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ಜತೆ ಚರ್ಚಿಸಿದ ಬಳಿಕವೇ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಅವರ ಬಳಿ ಗೆಲ್ಲಲು ಸಂಖ್ಯೆ ಇಲ್ಲದಿದ್ದರೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.

ಮೂವರು ಅಭ್ಯರ್ಥಿಗಳ ಗೆಲುವು:ಬಿಎಸ್‌ವೈ

‘ನಮ್ಮ ಪಕ್ಷದ ಮೂವರು ಅಭ್ಯರ್ಥಿಗಳನ್ನು ಯಾವುದೇ ಪಕ್ಷದ ಬೆಂಬಲವಿಲ್ಲದೇ ಗೆಲ್ಲಿಸಿಕೊಳ್ಳುತ್ತೇವೆ’ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಎಂದು ತಿಳಿಸಿದ್ದಾರೆ.

‘ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಮತ್ತು ಲಹರ್ ಸಿಂಗ್ ಸಿರೋಯ ಅವರು ಗೆಲ್ಲುವುದು ಖಚಿತ. ಮೂರನೇ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಯಾರನ್ನೂ ಕೇಳುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT