ಗುರುವಾರ , ಅಕ್ಟೋಬರ್ 21, 2021
22 °C

ರಾಜ್ಯೋತ್ಸವ ಪ್ರಶಸ್ತಿ; ಆನ್‌ಲೈನ್‌ನಲ್ಲಿ ಹೆಸರು ಶಿಫಾರಸು ಮಾಡಿ: ಸುನೀಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ತೆರೆಮರೆಯ ಸಾಧಕರನ್ನೂ ಗುರುತಿಸಿ, ಪ್ರಶಸ್ತಿ ನೀಡಲಾಗುವುದು.  ಸಾರ್ವಜನಿಕರು ಸಾಧಕರ ಹೆಸರನ್ನು ಆನ್‌ಲೈನ್ ಮೂಲಕ ಶಿಫಾರಸು ಮಾಡಬಹುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್ ತಿಳಿಸಿದ್ದಾರೆ. 

ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ಇಲ್ಲಿ ಶನಿವಾರ ಪ‍್ರತಿಕ್ರಿಯಿಸಿದ ಅವರು, ‘ರಾಜ್ಯೋತ್ಸವ ಪ್ರಶಸ್ತಿಗೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರನ್ನೂ ಗುರುತಿಸಬೇಕೆಂಬ ಅಭಿಲಾಷೆಯಿತ್ತು. ಹೀಗಾಗಿ, ಇದೇ ಮೊದಲ ಬಾರಿ ಅರ್ಜಿ ಸಲ್ಲಿಸದ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿ ಆಯ್ಕೆಗೆ ರಚನೆಯಾದ ಸಮಿತಿಗೆ ಜನರು ಸಾಧಕರ ಹೆಸರನ್ನು ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ. 

‘ಈ ವರ್ಷ 66 ಸಾಧಕರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಒಂದು ಅರ್ಜಿ ಪ್ರತಿಯಲ್ಲಿ ತಲಾ ಮೂವರು ಸಾಧಕರ ಹೆಸರುಗಳನ್ನು ಶಿಫಾರಸು ಮಾಡಬಹುದು. ಇದಕ್ಕಾಗಿ ವಿಶೇಷ ನಮೂನೆಯ ಅರ್ಜಿ ಪ್ರತಿಯನ್ನು ಸಿದ್ಧಪಡಿಸಲಾಗಿದ್ದು, ಸಾಧಕರ ವಿಳಾಸ ಸೇರಿದಂತೆ ವಿವಿಧ ಮಾಹಿತಿಯನ್ನು ಭರ್ತಿ ಮಾಡಲು ಅವಕಾಶವಿದೆ. ಶಿಫಾರಸಿನ ಅರ್ಜಿ ನಮೂನೆಗಳನ್ನು ತಜ್ಞರ ಸಮಿತಿಗೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಶಿಫಾರಸುಗಳನ್ನು ಸಮಿತಿಯ ಸದಸ್ಯರು ಪರಿಶೀಲಿಸಿ, ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಇದರಿಂದಾಗಿ ನೇರವಾಗಿ ಸಾರ್ವಜನಿಕರೇ ಸಾಧಕರನ್ನು ಆಯ್ಕೆ ಮಾಡಿದಂತಾಗುತ್ತದೆ. ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು’ ಎಂದು ಹೇಳಿದ್ದಾರೆ.

‘ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಪ್ರವೇಶಿಸಿ, ತಾವು ಪ್ರಶಸ್ತಿಗೆ ಶಿಫಾರಸು ಮಾಡುವ ವ್ಯಕ್ತಿಗಳ ವಿವರವನ್ನು ಕಳುಹಿಸಬಹುದು. ಅ.15 ಶಿಫಾರಸು ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು