ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ: ದೇಣಿಗೆ ಸಂಗ್ರಹಕ್ಕೆ ಚಾಲನೆ, 45 ದಿನಗಳ ಕಾಲ ದೇಣಿಗೆ ಸಂಗ್ರಹ

ವಿಶ್ವ ಹಿಂದೂ ಪರಿಷತ್‌ ನೇತೃತ್ವ‌, ಶ್ರೀರಾಮ ಮಂದಿರಕ್ಕೆ ₹1,500 ಕೋಟಿ ವೆಚ್ಚ
Last Updated 29 ಡಿಸೆಂಬರ್ 2020, 13:05 IST
ಅಕ್ಷರ ಗಾತ್ರ

ಮಡಿಕೇರಿ: ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ 45 ದಿನಗಳ ಕಾಲ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ’ ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಯೂ ಆಗಿರುವ, ಉಡುಪಿಯ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇಲ್ಲಿ ಮಾಹಿತಿ ನೀಡಿದರು.

ಅಯೋಧ್ಯೆ ಶ್ರೀರಾಮಮಂದಿರ ಸಮರ್ಪಣಾ ಅಭಿಯಾನದ ಪ್ರಯುಕ್ತ ಮಂಗಳವಾರ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

‘ನಿಧಿ ಸಂಗ್ರಹದಲ್ಲಿ ಲೋಪದೋಷವಾಗಬಾರದು, ಹಣ ದುರುಪಯೋಗವೂ ಆಗಬಾರದು ಎಂಬ ಕಾರಣಕ್ಕೆ ವಿಶ್ವ ಹಿಂದೂ ಪರಿಷತ್‌ಗೆ ಜವಾಬ್ಧಾರಿ ವಹಿಸಲಾಗಿದೆ. ವಿಶ್ವ ಹಿಂದೂ ಪರಿಷತ್‌ನ ದೊಡ್ಡ ಕಾರ್ಯಕರ್ತರ ಪಡೆ ಇದೆ. ಅವರು ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ’ ಎಂದು ಸ್ವಾಮೀಜಿ ಹೇಳಿದರು.

‘ಜ. 15ರಿಂದ 45 ದಿನಗಳ ಕಾಲ ನಡೆಯಲಿದೆ. ಭಕ್ತಿ ಪೂರ್ವಕವಾಗಿ ದೇಣಿಗೆ ನೀಡಬಹುದು. ಎಲ್ಲರನ್ನೂ ಒಳಗೊಂಡು ರಾಮಮಂದಿರ ನಿರ್ಮಿಸಬೇಕು ಎಂಬ ಉದ್ದೇಶದಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ’ ಎಂದು ಸ್ವಾಮೀಜಿ ನುಡಿದರು.

‘ಮಂದಿರ ನಿರ್ಮಾಣ ವೆಚ್ಚವು ₹ 500 ಕೋಟಿ, ಮೂಲಸೌಲಭ್ಯದ ಅಭಿವೃದ್ಧಿಗೆ ₹ 1 ಸಾವಿರ ಕೋಟಿ ವೆಚ್ಚ ತಗುಲಿದೆ. ಇಂತಹ ದೊಡ್ಡ ಯೋಜನೆಗೆ ನಾವೆಲ್ಲರೂ ಕೈಜೋಡಿಸೋಣ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೇಣಿಗೆ ನೀಡಿದರೆ ಸಾಕು. ಎಷ್ಟು ಕೊಟ್ಟಿದ್ದೇವೆ ಅನ್ನುವುದಕ್ಕಿಂತ ಯಾವ ಭಾವದಲ್ಲಿ ದೇಣಿಗೆ ನೀಡಿದ್ದೇವೆ ಎಂಬುದೇ ಮುಖ್ಯ’ ಎಂದು ಹೇಳಿದರು.

ವಿರಾಜಪೇಟೆಯ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಭವ್ಯ ದೇಗುಲಕ್ಕೆ ನಿಧಿ ಸಂಗ್ರಹ ಕಾರ್ಯವು ಯಶಸ್ವಿ ಆಗಬೇಕು. ಸಾವಿರದ ಐನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ದೇಗುಲ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕೆ ತಡೆಯಾಗಬಾರದು’ ಎಂದು ಆಶಿಸಿದರು.

‘ಸಮೃದ್ಧ ಸಮಾಜ ನಿರ್ಮಾಣವೂ ಆಗಬೇಕಿದೆ.‌ ಎಲ್ಲರನ್ನೂ ಒಳಗೊಳ್ಳುವ ರಾಮರಾಜ್ಯದ ನಿರ್ಮಾಣ ಆಗಬೇಕಿದೆ. ಎಲ್ಲರೂ ನಮ್ಮವರೆಂಬ ಹೃದಯ ವೈಶಾಲ್ಯತೆ ಮುಖ್ಯ. ಹೃದಯ ಬರಡು ಆಗಬಾರದು. ಸುಂದರ ಸಮಾಜವನ್ನು ಕಟ್ಟಬೇಕಿದೆ. ಹೃದಯದಲ್ಲೂ ಮಂದಿರ ನಿರ್ಮಾಣ ಆಗಬೇಕಿದೆ.‌ ಸಾತ್ವಿಕತೆ ಮೂಡಬೇಕಿದೆ. ರಾಮನ ಆದರ್ಶಗಳು ಪಾಲನೆ ಆಗಲಿ’ ಎಂದು ಹೇಳಿದರು.

ಪೊನ್ನಂಪೇಟೆಯ ರಾಮಕೃಷ್ಣಾಶ್ರಮದ ಬೋಧಸ್ವರೂಪಾನಂದ ಸ್ವಾಮೀಜಿ, ‘ಶ್ರದ್ಧೆ ಹಾಗೂ ಭಕ್ತಿಯಿಂದ ನಿರ್ವಹಿಸಿದ ಕೆಲಸಕ್ಕೆ ಯಶಸ್ಸು ಸಿಗಲಿದೆ. ಶ್ರೀರಾಮನ ಅನುಗ್ರಹ ವಿಳಂಬವಾದರೂ ಸಿಗುತ್ತಿದೆ. ಅದು ಶ್ರದ್ಧೆಯ ಕೇಂದ್ರ. ಶತಮಾನದಿಂದ ಭಕ್ತರು ಕಾಯುತ್ತಿದ್ದರು. ಅದು ಈಗ ಈಡೇರುತ್ತಿದೆ’ ಎಂದು ಹೇಳಿದರು.

‘ಯಾರೋ ಒಬ್ಬರು ಅನುದಾನ ನೀಡಿದರೆ, ಅದು ಒಬ್ಬರ ದೇವಸ್ಥಾನ ಆಗಲಿದೆ. ಅದಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ಕಾರ್ಯಾಲಯ ಉದ್ಘಾಟನೆ:ಇದಕ್ಕೂ ಮುನ್ನ ಗೋಪೂಜೆ ನೆರವೇರಿಸಿದ ಶ್ರೀಗಳು, ನಗರದ ಓಂಕಾರೇಶ್ವರ ದೇವಾಲಯದ ಸಮೀಪ ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉದ್ಘಾಟಿಸಿದರು.

ಮೈಸೂರು ರಾಮಕೃಷ್ಣ ಆಶ್ರಮದ ವಿಶ್ವವಿದಾನಂದ ಮಹಾರಾಜ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ನ. ಸೀತಾರಾಮ, ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ಹಾಜರಿದ್ದರು.

ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಾರ್ಹ

‘ಗೋಹತ್ಯೆ ನಿಷೇಧ ಕಾಯ್ದೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಗೋವುಗಳು ಉಳಿಯಬೇಕು’ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇಲ್ಲಿ ಹೇಳಿದರು.ಕಟ್ಟುನಿಟ್ಟಿನ ಕಾನೂನಿಂದ ಗೋಹತ್ಯೆಗೆ ಕಡಿವಾಣ ಬೀಳಲಿದೆ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT