ಮಂಗಳವಾರ, ಮೇ 11, 2021
26 °C
ಸಿ.ಡಿ: ರಮೇಶ ಜಾರಕಿಹೊಳಿ ವಿವಾದ

ಅತ್ಯಾಚಾರ ಪ್ರಕರಣ ದಾಖಲಿಸಿ: ಕಾಂಗ್ರೆಸ್‌ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಸಿ.ಡಿ ‍ಪ್ರಕರಣದಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಧರಣಿ ನಡೆಸಿದರು.

ಅಲ್ಲದೆ, ಈ ಪ್ರಕರಣದಲ್ಲಿ ಕೋಟಿಗಟ್ಟಲೆ ಹಣದ ಬಳಕೆ ಆಗಿದೆ ಎಂಬ ಆರೋಪ ಇರುವುದರಿಂದ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಿಂದಲೂ ತನಿಖೆ ನಡೆಸಬೇಕು. ತಮ್ಮ ವಿರುದ್ಧ ಮಾನಹಾನಿಕಾರಕ ಮಾಹಿತಿಗಳನ್ನು
ಪ್ರಕಟಿಸಬಾರದು ಎಂದು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿರುವ ಆರು ಸಚಿವರು ರಾಜೀನಾಮೆ ನೀಡಬೇಕು ಎಂದೂ ಕಾಂಗ್ರೆಸ್ ಒತ್ತಾಯಿಸಿತು.

ಸಿ.ಡಿ ಪ್ರಕರಣದ ಕುರಿತು ಕಾಂಗ್ರೆಸ್‌ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಪರಿವರ್ತಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿಯಮ 69 ರಡಿ ಚರ್ಚೆಗೆ ಅವಕಾಶ ನೀಡಿದರು. ನೈತಿಕತೆ, ಅಪರಾಧ ಕೃತ್ಯ, ಕಾನೂನಿನ ವ್ಯಾಖ್ಯಾನಗಳ ಬಗ್ಗೆ ಕೆಲವೊಮ್ಮೆ ಗಂಭೀರ, ಹಾಸ್ಯಭರಿತ, ಭಾವಾವೇಶ ಮತ್ತು ಆಕ್ರೋಶದಿಂದ ಕೂಡಿದ ಚರ್ಚೆ ನಡೆಯಿತು. ತಮ್ಮ ಪಕ್ಷದ ಸಚಿವರು ಹಾಗೂ ಶಾಸಕರ ಪರ ಬಿಜೆಪಿ ಸದಸ್ಯರು ರಕ್ಷಣೆಗೂ ಧಾವಿಸಲಿಲ್ಲ.

ವಿಷಯ ಪ್ರಸ್ತಾಪಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಸಚಿವರನ್ನು ಉದ್ದೇಶಿಸಿ ವಿಡಿಯೊ ಬಿಡುಗಡೆ ಮಾಡಿರುವ ಸಂತ್ರಸ್ತೆ, ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ರಮೇಶ ಜಾರಕಿಹೊಳಿ ತಮ್ಮನ್ನು ‘ಬಳಸಿಕೊಂಡಿರುವುದಾಗಿ’ ಉಲ್ಲೇಖಿಸಿದ್ದಾರೆ. ಒಪ್ಪಿಗೆ ಇಲ್ಲದೇ ಬಳಸಿಕೊಂಡಿದ್ದಾರೆ ಎಂದರೆ ಅತ್ಯಾಚಾರವಾಗುತ್ತದೆ. ‘ನಿರ್ಭಯಾ’ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಪೊಲೀಸರು ತಕ್ಷಣವೇ ದೂರು ದಾಖಲಿಸಿಕೊಳ್ಳಬೇಕಿತ್ತು. ಆದರೆ, ಪೊಲೀಸರು ದೂರು ದಾಖಲಿಸದೇ ಲೋಪ ಎಸಗಿದ್ದಾರೆ ಎಂದು ಹರಿಹಾಯ್ದರು.

ಈವರೆಗೂ ಸೆಕ್ಷನ್‌ 376 ರಡಿ ಏಕೆ ಕೇಸು ದಾಖಲಿಸಿಲ್ಲ? ರಮೇಶ ಜಾರಕಿಹೊಳಿಗೊಂದು ನ್ಯಾಯ ಮತ್ತು ಸಂತ್ರಸ್ತೆಗೆ ಬೇರೆ ನ್ಯಾಯವೆ? ಅಲ್ಲದೆ, ಎಸ್‌ಐಟಿ ರಚಿಸಿದಾಗಲೂ ಕಾರ್ಯವ್ಯಾಪ್ತಿಯನ್ನು ಆದೇಶದಲ್ಲಿ ಉಲ್ಲೇಖಿಸಿಲ್ಲ. ಇದು ಗಂಭೀರ ಲೋಪ ಎಂದು ಖಾರವಾಗಿ ನುಡಿದರು.

‘ಸರ್ಕಾರ ಇಲ್ಲಿಯವರೆಗೆ ಷಡ್ಯಂತ್ರದ ಬಗ್ಗೆ, ಅದರ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಕುರಿತು ಮಾತನಾಡುತ್ತಲೇ ಬಂದಿದೆಯೇ ಹೊರತು, ಒಬ್ಬ ಹೆಣ್ಣು ಮಗಳಿಗೆ ಅನ್ಯಾಯ ಆಗಿರುವ ಬಗ್ಗೆ ಮಾತನಾಡಿಲ್ಲ. ಇದು ತಾರತಮ್ಯ ಅಲ್ಲವೇನು? ಇಡೀ ರಾಜ್ಯದ ಮುಂದೆ ಅವಮಾನಿತಳಾಗಿ ನಿಂತಿದ್ದಾಳೆ ಅವಳಿಗೆ ನ್ಯಾಯವಿಲ್ಲವೇನು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ ಹೊರ ಬರುತ್ತಿದ್ದಂತೆ ಆರು ಸಚಿವರು ಇದ್ದಕ್ಕಿದ್ದಂತೆ ಸಿವಿಲ್ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ‌ ತಂದರು. ತಪ್ಪು ಮಾಡಿಲ್ಲ ಎಂದರೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಅಗತ್ಯ ಏನಿತ್ತು ಎಂದೂ ಸಿದ್ದರಾಮಯ್ಯ ಕುಟುಕಿದರು.

ತಿರುವು ಕೊಟ್ಟ ರಮೇಶ್‌ ಕುಮಾರ್:

ಸಿದ್ದರಾಮಯ್ಯ ಪಕ್ಷದ ನಿಲುವು ಪ್ರತಿಪಾದಿಸುತ್ತಿದ್ದಾಗ ಅವರ ವಾದದ ಸರಣಿಗೆ ಭಿನ್ನ ತಿರುವು ನೀಡಿದ್ದು ಹಿರಿಯ ಸದಸ್ಯ ಕೆ.ಆರ್‌.ರಮೇಶ್ ಕುಮಾರ್‌. ಲೈಂಗಿಕ ದೌರ್ಜನ್ಯ ಆಗಿದೆ ಎಂದ ಸಂತ್ರಸ್ತೆ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಆಕ್ಷೇಪ ವ್ಯಕ್ತಪಡಿಸಿದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ‘ಆಕೆ ಎಲ್ಲೂ ಅದನ್ನು ಉಲ್ಲೇಖಿಸಿಲ್ಲ’ ಎಂದರು.

‘ಬಳಸಿಕೊಳ್ಳಲಾಗಿತ್ತು’ ಎಂಬ ಪದವೇ ಅತ್ಯಾಚಾರಕ್ಕೆ ಸಮ ಎಂಬುದನ್ನು ವಾದಿಸುವಂತೆ ರಮೇಶ್‌ಕುಮಾರ್‌ ಪುಟ್ಟ ಚೀಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ಬರೆದುಕೊಟ್ಟರು. ಅದನ್ನು ಬಲವಾಗಿ ಪ್ರತಿಪಾದಿಸುವ ಮೂಲಕ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

ರಮೇಶ ಜಾರಕಿಹೊಳಿ ಮತ್ತು ಆರು ಸಚಿವರ ರಕ್ಷಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಇತರ ಸದಸ್ಯರಾಗಲಿ ಬರಲಿಲ್ಲ. ಸಚಿವ ಬಸವರಾಜ ಬೊಮ್ಮಾಯಿ ಮತ್ತು ಒಂದೆರಡು ಬಾರಿ ಸಚಿವ ಜಗದೀಶ ಶೆಟ್ಟರ್ ಅವರಷ್ಟೇ ಆರು ಸಚಿವರ ನೆರವಿಗೆ ಧಾವಿಸಿದರು.

ನ್ಯಾಯ ಸಮ್ಮತ ತನಿಖೆ: ಬೊಮ್ಮಾಯಿ

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ನ್ಯಾಯ ಸಮ್ಮತ ತನಿಖೆ ನಡೆಸಲಾಗುವುದು. ಪೊಲೀಸ್‌ ಅಧಿಕಾರಿಗಳಿಗೆ ಮುಕ್ತ ಅಧಿಕಾರ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಪ್ರಕರಣದಲ್ಲಿ ರಮೇಶ ಜಾರಕಿಹೊಳಿಯವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಷಡ್ಯಂತ್ರ ಸೇರಿದಂತೆ ಎಲ್ಲ ಆಯಾಮಗಳಿಂದಲೂ ಸಮಗ್ರ ತನಿಖೆ ನಡೆಸಲಾಗುವುದು. ಸತ್ಯ ಬಯಲಿಗೆ ಬರಬೇಕು ಎಂಬುದಷ್ಟೆ ಸರ್ಕಾರದ ಕಳಕಳಿ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

‘ಹಿಂದೆ ನೀವು ಮುಖ್ಯಮಂತ್ರಿ ಆಗಿದ್ದಾಗ ಎಚ್‌.ವೈ.ಮೇಟಿ ವಿರುದ್ಧ ಸಂತ್ರಸ್ತೆ ಅತ್ಯಾಚಾರದ ದೂರು ನೀಡಿದ್ದರೂ, ದೂರು ಏಕೆ ದಾಖಲಿಸಲಿಲ್ಲ. ಸಿಐಡಿ ತನಿಖೆ ನೆಪದಲ್ಲಿ ಕ್ಲಿನ್ ಚೀಟ್‌ ನೀಡಿದಿರಿ’ ಎಂದು ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು