ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ನನ್ನ ಬೆಂಬಲ, ನೆರವು ಎಂದ ಮುಲಾಲಿ

Last Updated 7 ಮಾರ್ಚ್ 2021, 7:04 IST
ಅಕ್ಷರ ಗಾತ್ರ

ವಿಜಯಪುರ: ಸಚಿವರು, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಯಾವುದೇ ಸಿ.ಡಿ, ದಾಖಲೆಗಳು ನನ್ನ ಬಳಿ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಬಳ್ಳಾರಿಯ ರಾಜಶೇಖರ ಮುಲಾಲಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿ ಹೊರಬಂದಿರುವಂತೆ ಇನ್ನೂ ಹಲವಾರು ಜನಪ್ರತಿನಿಧಿಗಳ ಇಂತಹ ಸಿಡಿಗಳು ಇರಬಹುದು ಎಂದು ಹೇಳಿಕೆ ನೀಡಿದ್ದೆ. ಅಷ್ಟರಲ್ಲೇ ಏನೇನು ಬೆಳವಣಿಗೆಯಾಗಿದೆ ಎಂಬುದು ರಾಜ್ಯದ ಜನತೆ ಎದುರು ಈಗಾಗಲೇ ಬಹಿರಂಗವಾಗಿದೆ' ಎಂದರು.

ಸಚಿವರು, ಶಾಸಕರಿಗೆ ಸಂಬಂಧಿಸಿದಂತೆ ನನ್ನ ಬಳಿ ಯಾವುದೇ ಸಿಡಿ, ದಾಖಲೆಗಳು ಇವೆ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಯಾರಾದರೂ ಸಂತ್ರಸ್ತ ಮಹಿಳೆಯರು ಇದ್ದರೆ ಅವರಿಗೆ ನೈತಿಕ ಮತ್ತು ಕಾನೂನು ಬೆಂಬಲ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ನನ್ನನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಮಂಡ್ಯದ ಕೆ.ಎಚ್.ಇಂದಿರಾ ಎಂಬುವವರು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ನಿನ್ನೆ ರಾತ್ರಿ ಫೋನ್ ಕರೆ ಮಾಡಿ ಮಾರ್ಚ್ 8ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಆದರೆ, ನನಗೆ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವುದರಿಂದ ವಿಚಾರಣೆಗೆ ಹಾಜರಾಗುವುದು ಕಷ್ಟಸಾಧ್ಯ. ಈ ಬಗ್ಗೆ ನಮ್ಮ ವಕೀಲರ ಜೊತೆ ಚರ್ಚಿಸುತ್ತೇನೆ ಎಂದರು.

ಇಂದಿರಾ ಅವರು ನನ್ನ ವಿರುದ್ಧ ದೂರು ದಾಖಲಿಸಿರುವುದರ ಹಿಂದೆ ಯಾರದೋ ಕುಮ್ಮಕ್ಕು ಇರುವ ಬಗ್ಗೆ ಅನುಮಾನವಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಿರುವುದರಿಂದ ಸಹಿಸಲಾಗದವರು ಈ ಪ್ರಕರಣದ ಹಿಂದೆ ಇರುವ ಸಾಧ್ಯತೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT