ಸಿ.ಡಿ ಪ್ರಕರಣ: ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಸೂಚನೆ

ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಬಾಕಿ ಇರುವಾಗ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಸೂಚನೆ ನೀಡಿತು.
‘ತನಿಖೆಯನ್ನು ಬೇರೆ ಸಂಸ್ಥೆಗೆ ವರ್ಗಾಯಿಸಬೇಕು ಎಂಬ ಮನವಿ ಆಧರಿಸಿ ವಿಚಾರಣೆಗಳು ನಡೆಯುತ್ತಿವೆ. ಇದರ ನಡುವೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವ ಆತಂಕ ಇದೆ’ ಎಂದು ಸಂತ್ರಸ್ತೆ ಪರ ಹಾಜರಾಗಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಆತಂಕ ವ್ಯಕ್ತಪಡಿಸಿದರು.
ವರದಿ ಸಲ್ಲಿಸದಂತೆ ಎಸ್‌ಐಟಿಗೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.
ಇನ್ನೊಂದೆಡೆ, ರಮೇಶ ಜಾರಕಿಹೊಳಿ ದೂರು ಆಧರಿಸಿ ನಡೆಸುತ್ತಿರುವ ತನಿಖೆ ಪ್ರಶ್ನಿಸಿ ಮತ್ತು ಎಸ್‌ಐಟಿ ಸ್ವತಂತ್ರವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಸಂತ್ರಸ್ತೆ ಏಕ ಸದಸ್ಯ ಪೀಠದ ಮುಂದೆ ಸಲ್ಲಿಸಿದ್ದ ಎರಡು ಅರ್ಜಿಗಳನ್ನೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಜೊತೆಗೆ ವಿಭಾಗೀಯ ಪೀಠ ಸೇರ್ಪಡೆಗೊಳಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.