ಬುಧವಾರ, ಏಪ್ರಿಲ್ 14, 2021
24 °C
ಎಸ್‌ಐಟಿ ತನಿಖೆ ಮುಂದುವರಿಕೆ

ಸಿ.ಡಿ.ಪ್ರಕರಣ: ಫೇಸ್‌ಬುಕ್ ಖಾತೆ ಅಳಿಸಿ ನಾಪತ್ತೆ; ಲಕ್ಷಗಟ್ಟಲೆ ಹಣ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌ ಪುಟ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾದ ಯುವಕ, ತನ್ನ ಫೇಸ್‌ಬುಕ್‌ ಖಾತೆಯನ್ನು ಅಳಿಸಿ ನಾಪತ್ತೆಯಾಗಿದ್ದಾನೆ. ಆತ ಹಾಗೂ ಆತನ ಪರಿಚಯಸ್ಥರ ಖಾತೆಗೆ ಲಕ್ಷಗಟ್ಟಲೆ ಹಣ ವರ್ಗಾವಣೆ ಆಗಿದೆ. ಆತನ ಪತ್ನಿ ಹೆಸರಿನಲ್ಲಿ ಫಾರ್ಚ್ಯೂನರ್‌ ಕಾರು ಸಹ ಬುಕ್ ಆಗಿರುವುದು ಎಸ್‌ಐಟಿ ವಿಚಾರಣೆಯಿಂದ ಗೊತ್ತಾಗಿದೆ.

ಸುದ್ದಿವಾಹಿನಿಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದ ಆತ, ಕಳೆದ ವರ್ಷ ಕೆಲಸ ಬಿಟ್ಟಿದ್ದ. ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತನಾಗಿ ಗುರುತಿಸಿಕೊಂಡಿದ್ದ. ಇದೀಗ ಆತನಿಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

‘ದಿನೇಶ್ ಕಲ್ಲಹಳ್ಳಿ ದೂರು ನೀಡುವುದಕ್ಕೂ ಮುನ್ನವೇ, ಸಿ.ಡಿಯಲ್ಲಿದ್ದ ದೃಶ್ಯಗಳು ಯುವಕನ ಬಳಿ ಇದ್ದವು. ಆತನೇ ಇತರೆ ಸುದ್ದಿವಾಹಿನಿಗಳ ವರದಿಗಾರರಿಗೆ ವಿಡಿಯೊಗಳನ್ನು ಕಳುಹಿಸಿದ್ದ. ಜೊತೆಗೆ, ಸಿ.ಡಿ ಬಗ್ಗೆ ದಿನೇಶ್ ಎಂಬುವರು ದೂರು ನೀಡಲಿರುವುದಾಗಿಯೂ ವರದಿಗಾರರಿಗೆ ತಿಳಿಸಿದ್ದ’ ಎಂಬುದು ಎಸ್‌ಐಟಿ ವಿಚಾರಣೆಯಿಂದ ಗೊತ್ತಾಗಿದೆ.

‘ಸಿ.ಡಿ ಚಿತ್ರೀಕರಣ ಹಾಗೂ ಇತರೆ ಕೃತ್ಯಗಳಲ್ಲಿ ಯುವಕನ ಪಾತ್ರವಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತನ ಜೊತೆ, ಸುದ್ದಿವಾಹಿನಿಯೊಂದರ ವರದಿಗಾರ ಸಹ ಭಾಗಿಯಾಗಿರುವ ಮಾಹಿತಿ ಇದೆ. ಇದೀಗ, ಅವರಿಬ್ಬರೂ ನಾಪತ್ತೆಯಾಗಿದ್ದಾರೆ. ಅವರು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಮೂಲಗಳು ಹೇಳಿವೆ.

‘ಆರೋಪಿ ಜೊತೆ ಒಡನಾಟವಿಟ್ಟುಕೊಂಡಿದ್ದ ಎಲ್ಲರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಪ್ರತಿಯೊಬ್ಬರು ಯುವಕನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಹಾಗೂ ಸಿ.ಡಿ.ಯನ್ನು ಯಾವೆಲ್ಲ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ವಿಚಾರಣೆಯಿಂದಲೇ ಗೊತ್ತಾಗಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

ಜಮೀನು ಖರೀದಿಗೆ ಮಾತುಕತೆ: ‘ನಾಪತ್ತೆಯಾಗಿರುವ ಯುವಕ, ಮೈಸೂರು ಬಳಿ ಜಮೀನು ಖರೀದಿಸಿರುವ ಬಗ್ಗೆ ಸ್ನೇಹಿತನ ಜೊತೆ ಮಾತುಕತೆ ನಡೆಸಿದ್ದ. ಹಲವೆಡೆ ಜಮೀನುಗಳನ್ನೂ ನೋಡಿಕೊಂಡು ಬಂದಿದ್ದ. ಕೆಲವೇ ದಿನಗಳಲ್ಲಿ ಮುಂಗಡ ಹಣ ನೀಡುವುದಾಗಿ ಮಾಲೀಕರಿಗೆ ಹೇಳಿದ್ದ’ ಎಂದು ಮೂಲಗಳು ಹೇಳಿವೆ.

‘ಯುವಕನೇ ಫಾರ್ಚ್ಯೂನರ್ ಕಾರು ಖರೀದಿಸಲು ಮಳಿಗೆಗೆ ಹೋಗಿ ಮುಂಗಡ ಹಣವನ್ನೂ ಕೊಟ್ಟು ಬಂದಿದ್ದ. ಸಿ.ಡಿ ಪ್ರಕರಣ ಸಂಬಂಧ ದಿನೇಶ್ ದೂರು ನೀಡುತ್ತಿದ್ದಂತೆ ನಾಪತ್ತೆಯಾಗಿರುವ ಯುವಕ, ಕಾರಿನ ಉಳಿದ ಮೊತ್ತವನ್ನೂ ಪಾವತಿ ಮಾಡಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ಮನೆ ಮಾಲೀಕರಿಗೆ ಕರೆ: ‘ಯುವತಿ, ಬೆಂಗಳೂರಿನ ಆರ್‌.ಟಿ.ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು. ಸಿ.ಡಿ ಪ್ರಕರಣ ಸದ್ದು ಮಾಡುತ್ತಿದ್ದಂತೆ ನಾಪತ್ತೆಯಾಗಿದ್ದ ಯುವತಿ, ಇತ್ತೀಚೆಗೆ ಮನೆಮಾಲೀಕರಿಗೆ ಕರೆ ಮಾಡಿ ಮಾತನಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ನನ್ನಿಂದ ನಿಮಗೆ ತೊಂದರೆ ಆಗಿದೆ. ಕ್ಷಮಿಸಿ. ಕೆಲವೇ ದಿನಗಳಲ್ಲಿ ಮನೆಗೆ ಬಂದು ಬಾಡಿಗೆ ಹಣ ನೀಡುತ್ತೇನೆ. ನಂತರವೇ, ಮನೆ ಖಾಲಿ ಮಾಡಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಯುವತಿ ಹೇಳಿರುವುದಾಗಿ ಗೊತ್ತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು