ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಿದ್ದರೆ ಸಾಲದು, ಬದುಕುವ ಕಲೆಯೂ ಗೊತ್ತಿರಬೇಕು

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ
Last Updated 21 ಮಾರ್ಚ್ 2023, 4:13 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಬಳಿ ಜ್ಞಾನವಿದ್ದರಷ್ಟೇ ಸಾಲದು. ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕು’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದ 11ನೇ ವಾರ್ಷಿಕ ಘಟಿಕೋತ್ಸವದ ಭಾಷಣ ಮಾಡಿದ ಅವರು, ‘ಶಿಕ್ಷಣ ಸಂಸ್ಥೆಗಳು ವೃತ್ತಿಪರರನ್ನು ಸೃಷ್ಟಿಸಿದರೆ ಸಾಲದು. ವಿದ್ಯಾರ್ಥಿಗಳಲ್ಲಿ ವೃತ್ತಿಯಾಚೆಗಿನ ನೈತಿಕ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಕಲಿಕೆಗೆ ಯಾವುದೇ ನಿರ್ಬಂಧ ಇರಬಾರದು. ಬದುಕಿನುದ್ದಕ್ಕೂ ನಾವು ಹೊಸ ವಿಷಯಗಳನ್ನು ಕಲಿಯುತ್ತಿರಬೇಕು’ ಎಂದು ತಿಳಿಸಿದರು.

‘ಆಧುನಿಕ ವಿಜ್ಞಾನ, ತಂತ್ರಜ್ಞಾನದ ಪ್ರಗತಿ ನಾಗಾಲೋಟದಲ್ಲಿ ಮುಂದುವರಿದಿದೆ. ಅಕುಶಲ ಕಾರ್ಮಿಕರ ಬಹುಪಾಲು ಕೆಲಸವನ್ನು ಯಂತ್ರೋಪಕರಣಗಳೇ ಕಸಿದುಕೊಂಡಿವೆ. ಹಾಗಾಗಿ ವೈಯಕ್ತಿಕ ಏಳ್ಗೆ ಜತೆಗೆ, ದೇಶ ಮತ್ತು ವಿಶ್ವದ ಸರ್ವತೋಮುಖ ಪ್ರಗತಿಗೆ ಪೂರಕವಾದ ಶಿಕ್ಷಣವನ್ನು ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದು ತಿಳಿಸಿದರು.

‘ಸತತ ಪ್ರಯತ್ನವೇ ಸಾಧನೆಯ ರಹಸ್ಯ. ಬದುಕಿನಲ್ಲಿ ಯಶಸ್ಸಿನ ಪಥವೇರಲು ಸತತವಾಗಿ ಪರಿಶ್ರಮ ವಹಿಸಬೇಕು’ ಎಂದೂ ಕರೆ ನೀಡಿದರು.

ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ.ಶಿವನಾಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ.ಎಸ್.ಬಿ.ಆಕಾಶ ಇತರರಿದ್ದರು.

*

ವೃತ್ತಿಕೌಶಲ ಬೆಳೆಸಿಕೊಳ್ಳಿ: ಗೆಹಲೋತ್‌

‘ಇಂದು ವಿವಿಧ ರಂಗಗಳು ಅಪೇಕ್ಷಿಸುವ ವೃತ್ತಿಕೌಶಲಗಳನ್ನು ಯುವಸಮೂಹ ಬೆಳೆಸಿಕೊಳ್ಳಬೇಕು. ಆಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಹೇಳಿದರು.

‘ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿದೆ. ಇದು ಯುವಕ, ಯುವತಿಯರ ಅಭಿವೃದ್ಧಿಗೂ ಪೂರಕವಾಗಿದೆ. ನಮ್ಮಲ್ಲಿರುವ ಜ್ಞಾನ ವೈಯಕ್ತಿಕ ಮತ್ತು ಸಮಾಜದ ಏಳ್ಗೆಗಾಗಿ ಬಳಕೆಯಾಗಬೇಕು’ ಎಂದರು.

‘ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಚನ್ನಮ್ಮ ಈ ನಾಡಿನ ಹೆಮ್ಮೆ. ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವೂ ತನ್ನ ಮೂಲ ಆಶಯಗಳ ಈಡೇರಿಸುವ ಸಲುವಾಗಿ ಫಲಪ್ರದವಾದ ಹೆಜ್ಜೆಗಳನ್ನು ಇಟ್ಟಿದೆ’ ಎಂದೂ ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT