ಮಂಗಳವಾರ, ಮೇ 24, 2022
26 °C

ಸಹನಟಿ ಮೇಲೆ ಅತ್ಯಾಚಾರ: ನಿರ್ಮಾಪಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿನಿಮಾ ಸಹ ನಟಿಗೆ ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಎಸಗಿರುವ ಆರೋಪದಡಿ ನಿರ್ಮಾಪಕರೂ ಆದ ನಟ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘41 ವರ್ಷದ ಮಹಿಳೆ ದೂರು ನೀಡಿದ್ದರು. ಕೆಲಸ ಕೊಡಿಸುವುದಾಗಿ ವಂಚನೆ (ಐಪಿಸಿ 417), ಅತ್ಯಾಚಾರ (ಐಪಿಸಿ 376) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಸಿನಿಮಾವೊಂದರ ಚಿತ್ರೀಕರಣದ ವೇಳೆ ಆರೋಪಿಗೆ ಸಹನಟಿ ಪರಿಚಯವಾಗಿತ್ತು. ಅದಾದ ನಂತರ, ಇಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಸಹನಟಿಯನ್ನು ಮದುವೆಯಾಗುವುದಾಗಿ ಹೇಳಿದ್ದ ಆರೋಪಿ, ಅವರ ಜೊತೆ ಸುತ್ತಾಡಿದ್ದ. ಹಲವು ಬಾರಿ ಅತ್ಯಾಚಾರ ಎಸಗಿದ್ದನೆಂದು ಹೇಳಲಾಗಿದೆ. ಈ ಸಂಗತಿ ಮಹಿಳೆ ನೀಡಿರುವ ದೂರಿನಲ್ಲಿದೆ‘ ಎಂದೂ ತಿಳಿಸಿವೆ.

‘ಮಿಷನ್ 2023' ಹೆಸರಿನಲ್ಲಿ ಕನ್ನಡ ಸಿನಿಮಾ ನಿರ್ಮಿಸಿದ್ದ ಆರೋಪಿ, ಅದೇ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಇತ್ತೀಚೆಗೆ ಸಹನಟಿಯನ್ನು ಮದುವೆಯಾಗಲು ಅವರು ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದರು. ನೊಂದ ಸಹನಟಿ, ಠಾಣೆಗೆ ಬಂದು ದೂರು ನೀಡಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬರಬೇಕಿದೆ‘ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು