ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿ ಬಿಡುಗಡೆ

ಬೆಂಗಳೂರು: ಬಾಲಕಿಯ ಅಪಹರಣ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯನ್ನು ಹೈಕೋರ್ಟ್ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ 29 ವರ್ಷದ ಯುವಕ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಅರ್ಜಿದಾರರ ಪರ ವಕೀಲ ಎಸ್.ಸುನಿಲ್ ಕುಮಾರ್, ‘ಸಂತ್ರಸ್ತೆ ಲೈಂಗಿಕ ಕೃತ್ಯಕ್ಕೆ ಒಳಗಾಗಿದ್ದಾಳೆ ಎಂಬುದನ್ನು ಸಾಬೀತುಪಡಿಸುವಲ್ಲಿ ವೈದ್ಯಕೀಯ ಸಾಕ್ಷ್ಯಗಳು ವಿಫಲವಾಗಿವೆ. ಸಂತ್ರಸ್ತೆ ಮುಖ್ಯ ವಿಚಾರಣೆ ಮತ್ತು ಪಾಟಿ ಸವಾಲಿನ ವೇಳೆ ತದ್ವಿರುದ್ಧ ಸಾಕ್ಷ್ಯ ನೀಡಿದ್ದಾಳೆ. ಹಾಗಾಗಿ, ಅರ್ಜಿದಾರನ ಬಿಡುಗಡೆಗೆ ಆದೇಶಿಸಬೇಕು’ ಎಂದು ವಾದ ಮಂಡಿಸಿದ್ದರು.
ಈ ವಾದಾಂಶಗಳನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ವಿಚಾರಣಾ ನ್ಯಾಯಾಲಯವು ಅಪರಾಧಿಗೆ ವಿಧಿಸಿರುವ ಎಲ್ಲ ಶಿಕ್ಷೆಗಳಿಂದ ಬಿಡುಗಡೆ ಮಾಡಬೇಕು’ ಎಂದು ಆದೇಶಿಸಿದೆ.
ಪ್ರಕರಣವೇನು?: ಆರೋಪಿಯು 2012ರ ಸೆಪ್ಟೆಂಬರ್ 7ರಂದು ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ ಆರೋಪದಡಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಏಳು ವರ್ಷ ಶಿಕ್ಷೆಗೆ ಒಳಗಾಗಿದ್ದ. ಪೊಕ್ಸೊ ಕಾಯ್ದೆ ಜಾರಿಗೆ ಬರುವ ಒಂದು ತಿಂಗಳ ಮೊದಲು ಈ ಕೃತ್ಯ ದಾಖಲಾಗಿತ್ತು.
ಅಂದಿನ ಸಂದರ್ಭದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕೇವಲ ಏಳು ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಲು ಮಾತ್ರವೇ ಕಾನೂನಿನಲ್ಲಿ ಅವಕಾಶವಿತ್ತು.
ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸುಶೀಲಾ ಅವರು, ಭಾರತೀಯ ದಂಡ ಸಂಹಿತೆ–1860ರ ಕಲಂ 143 (ಕಾನೂನು ಬಾಹಿರ ಕೂಟ), 366 (ಅಪಹರಣ, ಒತ್ತೆಯಾಳಾಗಿ ಇರಿಸಿಕೊಳ್ಳುವುದು, ಮಹಿಳೆಯನ್ನು ಮದುವೆಗೆ ಒತ್ತಾಯಿಸುವುದು), 376 (ಅತ್ಯಾಚಾರ), 120 ಬಿ (ಅಪರಾಧಿಕ ಸಂಚು), 201ರ (ಸಾಕ್ಷ್ಯನಾಶ) ಅನುಸಾರ ಆರೋಪಿಗೆ 2018ರ ಅಕ್ಟೋಬರ್ 26ರಂದು ಪ್ರಮುಖ ಆರೋಪಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.
ಅಂತೆಯೇ, ಅಪಹರಣಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾದ ಇನ್ನಿಬ್ಬರನ್ನು ಬಿಡುಗಡೆ ಮಾಡಿಲು ಆದೇಶಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಪ್ರಮುಖ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಅಪರಾಧಿ ಈಗಾಗಲೇ ಐದು ವರ್ಷ ಜೈಲು ಶಿಕ್ಷೆ ಪೂರೈಸಿದ್ದಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.