ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ–ಸಾಕು ನಾಯಿ ಸಾವು: ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Last Updated 29 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ‘ಅತಿ ವೇಗದಲ್ಲಿ ಎಸ್‌ಯುವಿ ಕಾರು ಚಲಾಯಿಸಿ ಸಾಕು ನಾಯಿಯ ಸಾವಿಗೆ ಕಾರಣವಾಗಿದ್ದಾರೆ’ ಎಂಬ ಆರೋಪದಡಿ ಕಾರು ಚಾಲಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಸಂಬಂಧ ಆರೋಪಿಯಾದ ಕುರುಬರಹಳ್ಳಿಯ ನಿವಾಸಿ ಜಿ.ಪ್ರತಾಪ್‌ ಕುಮಾರ್ ಎಂಬುವವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗದ ವಾಹನ ಚಾಲನೆ ಮಾಡಿದ ಸಂದರ್ಭದಲ್ಲಿಅಪಘಾತ ಸಂಭವಿಸಿ ಸಾಕು ನಾಯಿ ಮೃತಪಟ್ಟರೆ ಅಂತಹ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 279ರ ವ್ಯಾಪ್ತಿಯಲ್ಲಿ ಪರಿಗಣಿಸಲು ಆಗದು. ಮಾನವರ ಹೊರತಾದ ಜೀವಗಳಿಗೆ ಉಂಟಾದ ಗಾಯದ ಬಗ್ಗೆ ಈ ಕಲಂ ಎಲ್ಲೂ ವಿವರಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಅಂತೆಯೇ, ‘ಮೋಟಾರು ವಾಹನ ಕಾಯ್ದೆ–1988ರ ಕಲಂ 134 (ಎ) ಮತ್ತು (ಬಿ) ಅನುಸಾರ ವಾಹನ ಚಾಲಕ ಯಾವುದಾದರೂ ವ್ಯಕ್ತಿಗೆ ಗಾಯಗೊಳಿಸಿದ್ದರೆ ಮಾತ್ರವೇ ಅನ್ವಯ ಆಗುತ್ತದೆ. ಇದರ ವ್ಯಾಪ್ತಿಗೆನಾಯಿ ಅಥವಾ ಪ್ರಾಣಿಗಳು ಒಳಪಡುವುದಿಲ್ಲ’ ಎಂದೂ ನ್ಯಾಯಪೀಠ ವಿವರಿಸಿದೆ.

ಪ್ರಕರಣವೇನು?:
ಧೀರಜ್‌ ರಖೇಜಾ ಎಂಬುವವರ ತಾಯಿ 2018ರ ಫೆಬ್ರುವರಿ 24ರಂದು ತಮ್ಮ ಸಾಕು ನಾಯಿಯ ಜೊತೆ ಕುರುಬರಹಳ್ಳಿ ಪೈಪ್‌ಲೈನ್‌ ರಸ್ತೆಯ ವ್ಯಾಪ್ತಿಯಲ್ಲಿ ವಾಕಿಂಗ್‌ ಮಾಡುತ್ತಿದ್ದರು. ಈ ಸಮಯದಲ್ಲಿ ಪ್ರತಾಪ್‌ ಕುಮಾರ್‌ ಅವರು ಚಲಾಯಿಸುತ್ತಿದ್ದ ಎಸ್‌ಯುವಿ ಕಾರಿಗೆ ಸಿಕ್ಕು ಸಾಕು ನಾಯಿಮೃತಪಟ್ಟಿತ್ತು.

ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ವಿಜಯನಗರ ಸಂಚಾರ ಠಾಣೆ ಪೊಲೀಸರು ತನಿಖೆ ನಡೆಸಿ, ಆರೋಪಿ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 134 (ಎ) ಮತ್ತು (ಬಿ), 187 ಹಾಗೂ ಐಪಿಸಿಯ ಕಲಂ 279, 428 ಮತ್ತು 429ರ ಅಡಿಯಲ್ಲಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 2ಕ್ಕೆ (ಸಂಚಾರ ವಿಭಾಗ) ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವೆಚ್ಚದ ಬದಲಿಗೆ ಪುಸ್ತಕ ನೀಡಿ: ಹೈಕೋರ್ಟ್‌

ಬೆಂಗಳೂರು: ‘ಪ್ರಕರಣದಲ್ಲಿ ಕಕ್ಷಿದಾರರಿಗೆ ವಿಧಿಸಲಾಗುವ ವೆಚ್ಚದ ಹಣದ ಬದಲಿಗೆ ರಾಜ್ಯ ವಕೀಲರ ಪರಿಷತ್‌ ಮತ್ತು ವಕೀಲರ ಸಂಘಕ್ಕೆ ಪುಸ್ತಕಗಳನ್ನು ನೀಡಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣವೊಂದರ ಆದೇಶದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು,‘ಲರ್ನಿಂಗ್‌ ದ ಲಾ-ಗ್ಲಾನ್‌ ವಿಲ್ಲೆ ವಿಲಿಯಮ್ಸ್‌, ಲಾ ಇನ್‌ ಚೇಂಜಿಂಗ್ ಸೊಸೈಟಿ-ವೂಲ್ಫ್‌ ಗ್ಯಾಂಗ್‌ ಫ್ರೈಡ್‌ಮನ್‌, ಲಾ ಅಂಡ್‌ ಸೋಷಿಯಲ್ ಟ್ರಾಮ್ಸ್‌ಫರ್ಮೇಶನ್‌–ಪಿ.ಈಶ್ವರ ಭಟ್‌, ಫ್ಯೂಚರ್ ಆಫ್‌ ಹ್ಯೂಮನ್‌ ರೈಟ್ಸ್‌–ಡಾ.ಉಪೇಂದ್ರ ಭಕ್ಷಿ ಮತ್ತು ದ ಕೀ ಟು ಇಂಡಿಯನ್ ಪ್ರಾಕ್ಟೀಸ್‌–ಸರ್ ಡಿ.ಎಫ್‌.ಮುಲ್ಲಾ ವಿರಚಿತ ಪುಸ್ತಕಗಳನ್ನು ನೀಡಿ‘ ಎಂದು ಸೂಚಿಸಿದೆ.

‘ಡಿಫಾಲ್ಟ್‌ ರೂಪದಲ್ಲಿ ವಜಾಗೊಳ್ಳುವ ಅರ್ಜಿ, ಮೇಲ್ಮನವಿ ವಿಳಂಬ ಅಥವಾ ಅರ್ಜಿಯನ್ನು ಅನುಮತಿಸುವ ಸಮಯದಲ್ಲಿ ಸಾಮಾನ್ಯ ವಾಗಿ ಕೋರ್ಟ್ ವಿಧಿಸುವ ಡಿಫಾಲ್ಟ್‌ ವೆಚ್ಚದ ಬದಲಿಗೆ ಈ ಪುಸ್ತಕಗಳನ್ನು ರಾಜ್ಯ ವಕೀಲರ ಪರಿಷತ್ ಅಥವಾ ವಕೀಲರ ಸಂಘಕ್ಕೆ ನೀಡಬೇಕು’ ಎಂದು ನ್ಯಾಯಪೀಠ ವಿವರಿಸಿದೆ. ಈ ಮೊದಲು ವೆಚ್ಚದ ಮೊತ್ತವನ್ನು ವಕೀಲರ ಕಲ್ಯಾಣ ನಿಧಿ ಅಥವಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT