ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ 1ರಿಂದ ಮನೆ ಬಾಗಿಲಿಗೆ ಪಡಿತರ?

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೆ ಸಿದ್ಧತೆ
Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ಮಾದರಿಯಲ್ಲಿ ಪಡಿತರ ಚೀಟಿದಾರರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.

ನವೆಂಬರ್‌ 1ರಂದು ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ.

ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಆಹಾರ ಸಚಿವ ಉಮೇಶ ಕತ್ತಿ, ‘ಮನೆ ಬಾಗಿಲಿಗೆ ಪಡಿತರ’ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಸಿದ್ಧತೆ ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಆಂಧ್ರಪ್ರದೇಶದಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆರಂಭಿಸಿರುವ ಯೋಜನೆಯ ವಿವರ, ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬೇಕಿರುವ ಸೌಲಭ್ಯಗಳು, ವೆಚ್ಚ ಮತ್ತಿತರ ವಿವರಗಳನ್ನು ಸಭೆಯಲ್ಲಿ ಹಂಚಿಕೊಂಡಿದ್ದಾರೆ.

‘ಟಾಟಾ ಮತ್ತು ಮಾರುತಿ ಸುಝುಕಿ ಕಂಪನಿ ಅಧಿಕಾರಿಗಳು ತಾವು ಉತ್ಪಾದಿಸುವ ಸಣ್ಣ ಗಾತ್ರದ ಸರಕು ಸಾಗಣೆ ವಾಹನಗಳ ದರ, ಸಾಮರ್ಥ್ಯ, ಪ್ರತಿ ಕಿಲೋಮೀಟರ್‌ ಸಂಚಾರಕ್ಕೆ ತಗಲಬಹುದಾದ ವೆಚ್ಚ ಮತ್ತಿತರ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಸಂಪೂರ್ಣ ಮಾಹಿತಿ ಪಡೆದುಕೊಂಡ ಸಚಿವರು, ನ.1ರಿಂದ ಪ್ರಾಯೋಗಿಕ ಅನುಷ್ಠಾನ ಆರಂಭಿಸುವ ಸಾಧ್ಯತೆ ಕುರಿತೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

700 ವಾಹನ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಪ್ರತಿ ನ್ಯಾಯಬೆಲೆ ಅಂಗಡಿ ಜತೆಗೆ ಒಂದು ವಾಹನವನ್ನು ಜೋಡಣೆ ಮಾಡುವ ಪ್ರಸ್ತಾವವಿದೆ. ಇದಕ್ಕಾಗಿ 700 ವಾಹನಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

‘ಈಗ ಇರುವ ಪ್ರಸ್ತಾವದ ಪ್ರಕಾರ, ಮನೆ ಬಾಗಿಲಿಗೆ ಪಡಿತರ ಸಾಗಿಸುವುದಕ್ಕೆ ಪ್ರತಿ ನ್ಯಾಯಬೆಲೆ ಅಂಗಡಿಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು. ಅವರು ಖರೀದಿಸುವ ವಾಹನಕ್ಕೆ ಸರಕು ಮತ್ತು ಸೇವಾ ತೆರಿಗೆ, ಸಹಾಯಧನ ಸೇರಿದಂತೆ ಶೇಕಡ 30ರಷ್ಟು ನೆರವನ್ನು ಇಲಾಖೆಯಿಂದ ನೀಡಲಾಗುವುದು. ಶೇ 4ರ ಬಡ್ಡಿ ದರದಲ್ಲಿ ಆರು ವರ್ಷಗಳ ಅವಧಿಗೆ ಸಾಲವನ್ನೂ ಕೊಡಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಮೂಲಗಳು ಹೇಳಿವೆ.

ಆಂಧ್ರಪ್ರದೇಶದಲ್ಲಿ ಪಡಿತರ ಸಾಗಿಸುವ ವಾಹನದ ಮಾಲೀಕರಿಗೆ ಪ್ರತಿ ಕೆ.ಜಿ.ಗೆ ₹ 1ರಷ್ಟು ಸಾಗಣೆ ವೆಚ್ಚ ನೀಡಲಾಗುತ್ತದೆ. ಅದೇ ದರವನ್ನು ರಾಜ್ಯದಲ್ಲೂ ನಿಗದಿಪಡಿಸುವ ಪ್ರಸ್ತಾವವಿದೆ.

‘ಅ.28ರ ಸಭೆಯಲ್ಲಿ ಅಂತಿಮ ನಿರ್ಧಾರ’
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿಇದೇ 28ರಂದು ಉನ್ನತಮಟ್ಟದ ಸಭೆ ನಡೆಯಲಿದೆ. ಯೋಜನೆ ಅನುಷ್ಠಾನದ ದಿನಾಂಕ ಕುರಿತು ಆ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದುಸಚಿವ ಉಮೇಶ ಕತ್ತಿ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ರಾಜ್ಯದಲ್ಲಿ ಯೋಜನೆ ಜಾರಿಗೆ 10,000 ವಾಹನಗಳ ಅಗತ್ಯವಿದೆ. ವಾಹನ ಖರೀದಿ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಯೋಜನೆ ಆರಂಭದ ದಿನಾಂಕವನ್ನು ಈಗಲೇ ಹೇಳುವುದು ಕಷ್ಟ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT