ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಎಂಬಿಯಿಂದಲೇ ಕಚ್ಛಾ ರೇಷ್ಮೆ ಖರೀದಿ: ಸಚಿವ ನಾರಾಯಣ ಗೌಡ ಸೂಚನೆ

ಕೆಎಸ್ಐಸಿ ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಸೂಚನೆ
Last Updated 28 ಸೆಪ್ಟೆಂಬರ್ 2021, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ) ಕಡ್ಡಾಯವಾಗಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್‌ಎಂಬಿ) ಮೂಲಕವೇ ಕಚ್ಚಾ ರೇಷ್ಮೆ ಖರೀದಿ ಮಾಡಬೇಕು ಎಂದು ರೇಷ್ಮೆ ಸಚಿವ ಕೆ.ಸಿ. ನಾರಾಯಣ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಎಸ್‌ಎಂಬಿಯಿಂದ ಕಚ್ಚಾ ರೇಷ್ಮೆ ಖರೀದಿಗೆ ನೀಡಿದ್ದ ಸೂಚನೆ ಪಾಲನೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿಯವರಿಂದ ಕಚ್ಚಾ ರೇಷ್ಮೆ ಖರೀದಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಕೆಎಸ್‌ಐಸಿ ರೇಷ್ಮೆ ಉತ್ಪಾದನೆಯನ್ನು ದ್ವಿಗುಣಗೊಳಿಸಬೇಕು. ಹಾಸನ, ಬೆಳಗಾವಿ, ಕಲಬುರ್ಗಿ, ಕೂಡ್ಲಿಗಿಯಲ್ಲಿ ಬಳಕೆಯಾಗದೇ ಉಳಿದಿರುವ ರೇಷ್ಮೆ ನೂಲು ತೆಗೆಯುವ ಯಂತ್ರಗಳನ್ನು ದುರಸ್ತಿ ಮಾಡಿ, ಮೈಸೂರು, ಕನಕ‍ಪುರ, ಚನ್ನಪಟ್ಟಣ ಮತ್ತು ಟಿ. ನರಸೀಪುರದಲ್ಲಿರುವ ನಿಗಮದ ಘಟಕಗಳಲ್ಲಿ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ಮೈಸೂರು ರೇಷ್ಮೆ ಸೀರೆಗಳ ಹೊಸ ವಿನ್ಯಾಸವನ್ನು ರೂಪಿಸಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವಂತಹ ವಿನ್ಯಾಸಗಳನ್ನು ತಯಾರು ಮಾಡಬೇಕು. ಬೆಂಗಳೂರು ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ನಿಗಮದ ಮಾರಾಟ ಮಳಿಗೆ ತೆರೆಯಲು ಕ್ರಮ ಕೈಗೊಳ್ಳಬೇಕು. ಮುಂಬೈನ ದಾದರ್‌ ಮತ್ತು ಮಾತುಂಗಾ ಪ್ರದೇಶಗಳಲ್ಲೂ ಮಳಿಗೆ ತೆರೆಯಲು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಔಷಧಿ ಸಿಂಪಡಣೆಗೆ ಸೂಚನೆ: ರಾಜ್ಯದ ಕೆಲವು ಭಾಗಗಳಲ್ಲಿ ಹಿಪ್ಪುನೇರಳೆ ಬೆಳೆಗೆ ‘ತ್ರಿಪ್ಸ್‌ ಅಂಡ್‌ ಮೈಟ್ಸ್‌’ ಕೀಟ ಬಾಧೆ ಆರಂಭವಾಗಿದೆ. ಅಂತಹ ಎಲ್ಲ ಕಡೆಗಳಲ್ಲೂ ಇಲಾಖೆಯಿಂದಲೇ ಅಗತ್ಯ ಔಷಧಿ ಸಿಂಪಡಣೆ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಶಿವಮೊಗ್ಗ, ದಾವಣಗೆರೆ ಮತ್ತಿತರ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಗುರುತಿನ ಚೀಟಿ ವಿತರಿಸಬೇಕು. ಅವರು ಮಾರುಕಟ್ಟೆಗೆ ರೇಷ್ಮೆ ಗೂಡುಗಳನ್ನು ತಂದಾಗ ಪ್ರತಿ ಕೆ.ಜಿ.ಗೆ ₹ 10 ಸಾರಿಗೆ ವೆಚ್ಚ ನೀಡುವ ಕ್ರಮವನ್ನು ಪುನರಾರಂಭಿಸಬೇಕು ಎಂದು ಆದೇಶಿಸಿದರು.

ಕೆಎಸ್‌ಐಸಿ ಅಧ್ಯಕ್ಷ ಎಸ್‌.ಆರ್‌. ಗೌಡ, ಕೆಎಸ್‌ಎಂಬಿ ಅಧ್ಯಕ್ಷೆ ಸಚಿತಾ, ವ್ಯವಸ್ಥಾಪಕ ನಿರ್ದೇಶಕಿ ಕನಕವಲ್ಲಿ ಮತ್ತು ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT