ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಚಂದನದ ಕಳ್ಳಸಾಗಣೆಗೆ ಕಸ್ಟಮ್ಸ್‌ ಅಧಿಕಾರಿಗಳ ಸಹಕಾರ!

ಕೆಐಎಎಲ್‌ನಿಂದ ವಿಮಾನಗಳಲ್ಲಿ ರವಾನೆ l 3,293 ಕೆ.ಜಿ. ರಕ್ತಚಂದನ ವಶ
Last Updated 28 ಡಿಸೆಂಬರ್ 2021, 19:40 IST
ಅಕ್ಷರ ಗಾತ್ರ

ಬೆಂಗಳೂರು: ಅಳಿವಿನಂಚಿನಲ್ಲಿರುವ ರಕ್ತಚಂದನದ ದಿಮ್ಮಿಗಳನ್ನು ಕಸ್ಟಮ್ಸ್‌ ಅಧಿಕಾರಿಗಳ ನೆರವಿನಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ ಸಂಬಂಧ ಕಸ್ಟಮ್ಸ್‌ನ ಇಬ್ಬರು ಸೂಪರಿಂಟೆಂಡ್‌ಗಳು, ಒಬ್ಬ ಇನ್‌ಸ್ಪೆಕ್ಟರ್‌ ಮತ್ತು ಕಳ್ಳಸಾಗಣೆ ಜಾಲದ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಸಿಬಿಐ, ತನಿಖೆ ಆರಂಭಿಸಿದೆ. ಈ ವರ್ಷದ ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಏಳು ಬಾರಿ ಸರಕು ಸಾಗಣೆ ವಿಮಾನಗಳ ಮೂಲಕ ಬೃಹತ್‌ ಪ್ರಮಾಣದ ರಕ್ತಚಂದನದ ದಿಮ್ಮಿಗಳನ್ನು ಕಳ್ಳಸಾಗಣೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನೀಡಿದ್ದ ದೂರನ್ನು ಆಧರಿಸಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಘಟಕ ಪ್ರಾಥಮಿಕ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ಲಭಿಸಿರುವ
ಸಾಕ್ಷ್ಯಗಳ ಆಧಾರದಲ್ಲಿ ಡಿಸೆಂಬರ್‌ 22ರಂದು ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಕರ್ತವ್ಯದಲ್ಲಿದ್ದ ಕಸ್ಟಮ್ಸ್‌ ಸೂಪರಿಂಟೆಂಡೆಂಟ್‌ಗಳಾದ ಎಂ.ಸಿ. ವೆಂಕಟೇಶ್‌, ಅನಂತ ಪದ್ಮನಾಭ ರಾವ್‌, ಇನ್‌ಸ್ಪೆಕ್ಟರ್‌ ರವಿಂದರ್‌ ಪವಾರ್‌, ಕಳ್ಳಸಾಗಣೆದಾರರಾದ ಸತೀಶ್‌ ಕುಮಾರ್‌ ಟಿ. ಮತ್ತು ನಝೀಬ್‌ ಜೆಡ್‌ ಎಂಬುವವರ ವಿರುದ್ಧ ತನಿಖೆ ಆರಂಭಿಸಲಾಗಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಜುಲೈ 29ರಂದು ಕೆಐಎಎಲ್‌ ಏರ್‌ ಕಾರ್ಗೋ ಕಾಂಪ್ಲೆಕ್ಸ್‌ ಮೇಲೆ ದಾಳಿಮಾಡಿ, 3,293 ಕೆ.ಜಿ. ತೂಕದ ರಕ್ತಚಂದನದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದರು. ಅಂತರರಾಷ್ಟ್ರೀಯ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್‌ಟಿ) ಪರವಾನಗಿ ಮತ್ತು ಸೂಕ್ತ ದಾಖಲೆಗಳಿಲ್ಲದೆ ಈ ದಿಮ್ಮಿಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು.

ಸತೀಶ್‌ ಕುಮಾರ್‌ ಮತ್ತು ನಝೀಬ್‌ ಸೇರಿಕೊಂಡು ‘ಕೈಗಾರಿಕೆಗಳಲ್ಲಿ ಬಳಸುವ ಕೊಳವೆ’ ಎಂಬುದಾಗಿ ದಾಖಲೆ ಸೃಷ್ಟಿಸಿ ರಕ್ತಚಂದನದ ದಿಮ್ಮಿಗಳನ್ನು ವಿಮಾನ ನಿಲ್ದಾಣಕ್ಕೆ ತರುತ್ತಿದ್ದರು. ಕಸ್ಟಮ್ಸ್‌ ಅಧಿಕಾರಿಗಳು ಅದನ್ನು ದೃಢೀಕರಿಸಿ ಸಾಗಣೆಗೆ ಅನುಮತಿ ನೀಡುತ್ತಿದ್ದರು. ಜೂನ್‌ 3ರಿಂದ ಜುಲೈ 26ರ ಅವಧಿಯಲ್ಲಿ ಏಳು ಬಾರಿ ಈ ರೀತಿ ರಕ್ತಚಂದನವನ್ನು ರಫ್ತು ಮಾಡಲಾಗಿದೆ ಎಂಬ ಉಲ್ಲೇಖ ಎಫ್‌ಐಆರ್‌ನಲ್ಲಿದೆ.

‘ದಾಖಲೆಗಳ ದೃಢೀಕರಣ, ರಕ್ತಚಂದನದ ಕಳ್ಳಸಾಗಣೆಗೆ ಅನುಮತಿ ನೀಡಲು ಕೆಲವರು ವೆಂಕಟೇಶ್‌, ಅನಂತ ಪದ್ಮನಾಭ ರಾವ್‌ ಮತ್ತು ರವಿಂದರ್‌ ಪವಾರ್‌ ಅವರಿಗೆ ದೊಡ್ಡ ಮೊತ್ತದ ಲಂಚ ನೀಡುತ್ತಿದ್ದರು. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಈ ಮೂವರಿಗೆ
₹ 15 ಲಕ್ಷಕ್ಕೂ ಹೆಚ್ಚು ಲಂಚ ನೀಡಿರುವುದಕ್ಕೆ ಪ್ರಾಥಮಿಕ ತನಿಖೆಯಲ್ಲಿ ಸಾಕ್ಷ್ಯಗಳು ಲಭಿಸಿವೆ’ ಎಂದು ಸಿಬಿಐ ತಿಳಿಸಿದೆ.

ಹಲವು ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಕ್ತಚಂದನ ಕಳ್ಳಸಾಗಣೆ ಮಾಡಲಾಗಿದೆ. ಸತೀಶ್‌ ಕುಮಾರ್‌ ಮತ್ತು ನಝೀಬ್‌ ಸಾಗಣೆ ಮಾಡಿದ ಸರಕುಗಳನ್ನು ತೆರೆದ ತಪಾಸಣೆ ಅಥವಾ ಸ್ಕ್ಯಾನಿಂಗ್‌ಗೆ ಒಳಪಡಿಸದೇ ಕಸ್ಟಮ್ಸ್‌ ಅಧಿಕಾರಿ
ಗಳು ಕಳ್ಳಸಾಗಣೆಗೆ ನೆರವು ನೀಡಿದ್ದಾರೆ ಎಂಬ ಆರೋಪಎಫ್‌ಐಆರ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT