ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಗೆ ₹100 ಕೋಟಿ ಮಳೆ ಪರಿಹಾರ ಘೋಷಿಸಲು ಕಾಂಗ್ರೆಸ್‌ ಒತ್ತಾಯ

Last Updated 12 ಜುಲೈ 2022, 10:58 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. 185 ಹೆಕ್ಟೇರ್‌ ಕೃಷಿ ಭೂಮಿ, 12 ಹೆಕ್ಟೇರ್‌ ತೋಟಗಳು ನಾಶವಾಗಿವೆ. ರಸ್ತೆಗಳು ಅಧ್ವಾನವಾಗಿವೆ. ಜಿಲ್ಲೆಯಲ್ಲಿ ಮಳೆ ಪರಿಹಾರ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹ 100 ಕೋಟಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಹರೀಶ್‌ ಕುಮಾರ್ ಒತ್ತಾಯಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸತತ ಮೂರು ವರ್ಷಗಳಲ್ಲೂ ಪ್ರವಾಹ ಕಾಣಿಸಿಕೊಂಡಿದೆ. ಭೀಕರ ಪ್ರವಾಹದಿಂದ ಜಿಲ್ಲೆಯ ಜನ ತತ್ತರಿಸಿದ್ದಾರೆ. ಜನ ಭಯದಿಂದ ಬದುಕುವ ಸ್ಥಿತಿ ಇದೆ’ ಎಂದು ದೂರಿದರು.

‘ಮಳೆಯಿಂದಾಗಿ ಮೃತಪಟ್ಟ ಐವರ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಪ್ರವಾಹದಿಂದ ಹದಗೆಟ್ಟಿರುವ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಬೇಕು. ಹಾನಿಗೊಳಗಾದ ಶಾಲೆಗಳ ಹಾಗೂ ಅಂಗನವಾಡಿಗಳ ಕಟ್ಟಡ ದುರಸ್ತಿಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮೂರು ವರ್ಷಗಳಲ್ಲಿ ಪ್ರವಾಹದಿಂದ ರಾಜ್ಯದಲ್ಲಿ ₹ 8 ಸಾವಿಕ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಅದರೆ, ಕೇಂದ್ರ ಸರ್ಕಾರ ಕೇವಲ ₹ 3965 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಡಬಲ್‌ ಎಂಜಿನ್‌ ಸರ್ಕಾರ ಹಾಗೂ ಬಿಜೆಪಿಯ 25 ಸಂಸದರು ಇದ್ದರೂ ಕೇಂದ್ರದಿಂದ ಆಗಿರುವ ಅನ್ಯಾಯ ಸರಿಪಡಿಸಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟಿಲ್ಲ ಎಂದು ಶಿಕ್ಷಣ ಸಚಿವರು ವಾದಿಸುತ್ತಿದ್ದರು. ಈಗ ಪಠ್ಯ ಕೈಬಿಟ್ಟಿದ್ದನ್ನು ಅವರೇ ಒಪ್ಪಿಕೊಂಡಿದ್ದಾರೆ. ಸರ್ಕಾರ ಈ ಪಠ್ಯವನ್ನು ಮರುಸೇರ್ಪಡೆ ಮಾಡುತ್ತದೊ ಕಾದು ನೋಡಬೇಕಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ‘ಜಿಲ್ಲೆಯಲ್ಲಿ ಮಳೆ ಹಾನಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಾಗೂಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ‘ ಎಂದು ತಿಳಿಸಿದರು.

‘ಮಣ್ಣಿನಡಿ ಸಿಲುಕಿದವರನ್ನು ಆಸ್ಪತ್ರೆಗಳಿಗೆ ಅಲೆದಾಡಿಸಿದರು’

‘ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಗುಡ್ಡ ಕುಸಿದು ಶೆಡ್‌ನಲ್ಲಿ ಸಿಲುಕಿದ್ದ ನಾಲ್ವರನ್ನು ತಕ್ಷಣ ಹೊರತೆಗೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ವೈದ್ಯರ ನಿಯೋಗವನ್ನೂ ಕಳುಹಿಸಿಲ್ಲ. ಅವರು ನಾಲ್ಕು ಗಂಟೆ ಮಳೆಯಲ್ಲಿ ಸಿಲುಕಿದ್ದರು. ಗಾಯಾಳುಗಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಆರೋಪಿಸಿದರು.

‘ಕಾರ್ಮಿಕರನ್ನು ಸ್ಥಳೀಯರೇ ಬಂಟ್ವಾಳ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿಂದ ಅವರನ್ನು ಎ.ಜೆ. ಆಸ್ಪತ್ರೆಗೆ ಕಳುಹಿಸಲಾಯಿತು. ಅವರ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ಜಿಲ್ಲಾಡಳಿತದಿಂದ ಸಿಗದ ಕಾರಣ ಮಂಗಳಾ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದ ರಮಾನಾಥ ರೈ ವಿವರಿಸಿದರು.

ಮುಕ್ಕುಡದಲ್ಲಿ ಶೆಡ್‌ನಲ್ಲಿ ಸಿಲುಕಿದ್ದ ನಾಲ್ವರು ರಬ್ಬರ್ ಟ್ಯಾಪಿಂಗ್‌ ಕಾರ್ಮಿಕರಲ್ಲಿ ಮೂವರು ಮೃತಪಟ್ಟಿದ್ದಾರೆ.

‘ಜಿಲ್ಲೆಯಲ್ಲಿ ವಿವಿಧ ಕಡೆ ಗುಡ್ಡಕುಸಿತದಿಂದ ಅಪಾಯಕ್ಕೆ ಸಿಲುಕಿನ ಮನೆಗಳನ್ನು ಖಾಲಿ ಮಾಡುವಂತೆ ಕಟುಂಬಗಳಿಗೆ ನೋಟಿಸ್‌ ನೀಡಲಾಗಿದೆ. ಆದರೆ, ಅವರ ವಾಸ್ತವ್ಯಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ರೈ ದೂರಿದರು.

‘ಪರಿಹಾರ ಕಾರ್ಯದಲ್ಲಿ ಕಂಜೂಸುತನ ಮಾಡಬಾರದು ಎಂದು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರಿಹಾರ ಕಾರ್ಯಕ್ಕೆ ಸರ್ಕಾರ ಹಣ ಒದಗಿಸಿದರೆ ಅಧಿಕಾರಿಗಳು ಕಂಜೂಸುತನ ಮಾಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಪರಿಹಾರ ಕಾರ್ಯಕ್ಕೆ ಹಣ ಬಿಡುಗಡೆ ಮಾಡುವಾಗ ಸರ್ಕಾರ ಕಂಜೂಸುತನ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

‘ಉಸ್ತುವಾರಿ ಸಚಿವರ ವೈಫಲ್ಯದಿಂದ ಹೆಚ್ಚು ನಷ್ಟ’

ಜಿಲ್ಲೆಯಲ್ಲಿ ಮಳೆಯಿಂದಾಗಿ ಈ ಬಾರಿ ಹೆಚ್ಚಿನ ಹಾನಿ ಉಂಟಾಗುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯವೇ ಕಾರಣ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಟೀಕಿಸಿದರು.

‘ಪ್ರವಾಹಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಉಸ್ತುವಾರಿ ಸಚಿವರಾಗಲೀ, ಬಂದರು ಮತ್ತು ಮೀನುಗಾರಿಕಾ ಸಚಿವರಾಗಲೀ ಸಭೆ ನಡೆಸಿಲ್ಲ. ಪ್ರವಾಹದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರೂ ಪರಿಸ್ಥಿತಿ ನಿಭಾಯಿಸಲು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಅವರು ಮಳೆ ಸಂತ್ರಸ್ತ ಪ್ರದೇಶಕ್ಕೆ ಕಂದಾಯ ಸಚಿವರು ಭೇಟಿ ನೀಡಿದಾಗ ಅವರು ಜೊತೆಯಲ್ಲಿ ಬಂದಿದ್ದು ಬಿಟ್ಟರೆ ಬೇರೆ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತಡೆಯಲು ಸೀಗ್ರೌಂಡ್‌ ಹಾಗೂ ಬಟ್ಟಪ್ಪಾಡಿಯಲ್ಲಿ ತಲಾ 100 ಮೀ ಉದ್ದಕ್ಕೆ ಕಿನಾರೆಯಲ್ಲಿ ತಕ್ಷಣ ಕಲ್ಲುಗಳನ್ನು ಅಳವಡಿಸಬೇಕಿದೆ. ಕಂದಾಯ ಸಚಿವರು ಭೇಟಿ ನೀಡಿ ನಾಲ್ಕು ದಿನಗಳು ಕಳೆದ ಬಳಿಕವೂ ತುರ್ತು ನಿರ್ವಹಣಾ ಕಾರ್ಯ ನಡೆದಿಲ್ಲ. ಕಡಲ್ಕೊರೆತ ತಡೆಗೆ ಕೈಗೊಂಡ ಶಾಶ್ವತ ಕಾಮಗಾರಿಗಳ ನಿರ್ವಹಣೆಗೂ ಸರ್ಕಾರ ಹಣ ಮೀಸಲಿಟ್ಟಿಲ್ಲ. ಮನೆ ಕಳೆದುಕೊಂಡವರಿಗೆ 24 ಗಂಟೆ ಒಳಗೆ ₹ 10 ಸಾವಿರ ಪರಿಹಾರ ನೀಡುವುದಾಗಿ ನೀಡಿದ ಭರವಸೆಯೂ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಾರಿ ಗುಡ್ಡ ಕುಸಿತದಿಂದ ಅನೇಕ ಕಡೆ ಹಾನಿ ಉಂಟಾಗಿದೆ. ಕೆಲವೆಡೆ ಮನೆಗಳೂ ಅಪಾಯಕ್ಕೆ ಸಿಲುಕಿವೆ. ಇದನ್ನು ತೆರವುಗೊಳಿಸಲು ಸರ್ಕಾರವೇ ವಿಶೇಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT