ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆಗಳ ಸುರಕ್ಷತೆ: ಗಮನಹರಿಸಲು ಮನವಿ

Last Updated 25 ಮಾರ್ಚ್ 2022, 20:11 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಮೇಲ್ಸೇತುವೆಗಳ ಸ್ಥಿತಿಗತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ನೇಮಿಸುವಂತೆ ಬಿಜೆಪಿ ಸದಸ್ಯ ಕೆ.ಸಿ. ರಾಮಮೂರ್ತಿ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದರು.

ಶುಕ್ರವಾರ ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ದೇಶದ ವಿವಿಧೆಡೆ ಮೇಲ್ಸೇತುವೆಗಳ ಕುಸಿತದಿಂದ ಜೀವಹಾನಿಗೂ, ಆರ್ಥಿಕ ಹಿನ್ನಡೆಗೂ ಕಾರಣವಾಗುತ್ತಿದ್ದು, ಸುರಕ್ಷತೆಗೆ ಗಮನ ಹರಿಸಬೇಕು ಎಂದು ಕೋರಿದರು.

12 ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿರುವ ಬೆಂಗಳೂರಿನ ನಾಗಸಂದ್ರ– ಗೊರಗುಂಟೆಪಾಳ್ಯ ಮೇಲ್ಸೇತುವೆಯ 8ನೇ ಮೈಲಿಯಲ್ಲಿರುವ 102 ಮತ್ತು 103ನೇ ಕಂಬಗಳ ನಡುವೆ ತಪಾಸಣೆ ನಡೆಸಿದ ವೇಳೆ ಕಂಬಗಳಲ್ಲಿ ಬಳಸಿದ ಕಬ್ಬಿಣ ತುಕ್ಕು ಹಿಡಿದಿದ್ದು ಪತ್ತೆಯಾಗಿದೆ. ಮೇಲ್ಸೇತುವೆಯ ಸುರಕ್ಷತೆಗೆ ಪೂರಕವಾಗಿರುವ ಕೇಬಲ್‌ಗಳ ಸ್ಥಿತಿ ಹದಗೆಟ್ಟಿದರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ ಎಂದರು.

ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಮಾತ್ರವಲ್ಲದೆ, ಬೇರೆಬೇರೆ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುತ್ತ ಆರ್ಥಿಕ ಜೀವನಾಡಿಯಾಗಿರುವ ಈ ಮೇಲ್ಸೇತುವೆಯ ಮೇಲೆ ತೆರಳಲು ವಾಹನ ಸವಾರರು ಭಯಪಡುವಂತಾಗಿದೆ ಎಂದು ಅವರು ಹೇಳಿದರು.

ಗುಣಮಟ್ಟದ ಕಾಮಗಾರಿ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಈ ಮೇಲ್ಸೇತುವೆ ಅಪಾಯಕಾರಿಯಾಗಿದೆ ಎಂಬ ಕೂಗು ಕೇಳಿಬಂದ ನಂತರ, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಾಯದಿಂದ ಪರಿಶೀಲನೆ ನಡೆಸಲಾಗಿದೆ. ತಜ್ಞರು ಈ ಮೇಲ್ಸೇತುವೆಯು ‘ಅಸುರಕ್ಷಿತ’ ಎಂಬ ವರದಿ ಸಲ್ಲಿಸಿದ ನಂತರ ಅಲ್ಪಸ್ವಲ್ಪ ದುರಸ್ತಿ ಕಾರ್ಯ ಕೈಗೊಂಡು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ದೇಶದ ಕೆಲವೆಡೆ ನೂರು ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆಗಳು ಈಗಲು ಸುರಕ್ಷಿತವಾಗಿವೆ. ಆದರೆ, ಅಪಾರ ಪ್ರಮಾಣದ ಹಣ ವ್ಯಯಿಸಿ, ಕೇವಲ ಒಂದು ದಶಕದ ಹಿಂದೆ ನಿರ್ಮಿಸಿರುವ ಅನೇಕ ಮೇಲ್ಸೇತುವೆಗಳು ಹಾಳಾಗಿರುವುದು ಆಘಾತಕಾರಿ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಿರ್ಮಾಣ ಹಂತದಲ್ಲಿ ಉಸ್ತುವಾರಿಯಲ್ಲಿದ್ದ ಎಂಜಿನಿಯರಿಂಗ್ ಸಿಬ್ಬಂದಿ ಹಾಗೂ ಏಜೆನ್ಸಿಗಳನ್ನೇ ಮೇಲ್ಸೇತುವೆಗಳ ಕಳಪೆ ಕಾಮಗಾರಿಗೆ ಹೊಣೆಗಾರರನ್ನಾಗಿ ಮಾಡಿ ಅಪರಾಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಇಂತಹ ಮೇಲ್ಸೇತುವೆಗಳ ಸ್ಥಿತಿಗತಿ ಅಧ್ಯಯನ ಮಾಡಲು ತಜ್ಞರ ತಂಡವನ್ನು ನೇಮಿಸಿ, ಸಂಭವನೀಯ ಅನಾಹುತವನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT