ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ವಿಷಯ ಅಧಿವೇಶನದಲ್ಲಿ ಪ್ರಸ್ತಾಪಿಸಲು ಆಗ್ರಹ

Last Updated 20 ಸೆಪ್ಟೆಂಬರ್ 2020, 6:22 IST
ಅಕ್ಷರ ಗಾತ್ರ

ಹೊಸಪೇಟೆ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕೆಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಹಕ್ಕೊತ್ತಾಯ ಮಾಡಿದೆ.

ಈ ಸಂಬಂಧ ಭಾನುವಾರ ನಗರದ ರಾಣಿಪೇಟೆಯಲ್ಲಿನ ಆನಂದ್‌ ಸಿಂಗ್‌ ಅವರ ಮನೆಗೆ ತೆರಳಿದ ಸಮಿತಿಯ ಪದಾಧಿಕಾರಿಗಳು ಸಚಿವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

‘ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೇ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಸ್ವಂತ ಹಣ ಖರ್ಚು ಮಾಡಿ ಆನ್‌ಲೈನ್‌ ತರಗತಿಗಳನ್ನು ಕೂಡ ನಡೆಸಿಕೊಡುತ್ತಿದ್ದಾರೆ. ಹೀಗಿದ್ದರೂ ಸೇವಾ ಭದ್ರತೆ ಇಲ್ಲ. ಸುಮಾರು ಮೂರು ದಶಕಗಳಿಂದ ‘ಅತಿಥಿ’ಗಳಾಗಿಯೇ ಕೆಲಸ ನಿರ್ವಹಿಸುತ್ತಿದ್ದು, ಬದುಕು ಅತಂತ್ರವಾಗಿದೆ’ ಎಂದು ಗೋಳು ತೋಡಿಕೊಂಡಿದ್ದಾರೆ.

‘2019ರಲ್ಲಿ ಯುಜಿಸಿ ಹೊರಡಿಸಿದ ಸುತ್ತೋಲೆ ಪ್ರಕಾರ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ₹1,500 ಅಥವಾ ಮಾಸಿಕ ₹50,000 ವೇತನ ನಿಗದಿ ಮಾಡಬೇಕೆಂದು ತಿಳಿಸಿತ್ತು. ಆದರೆ, ಇಂದಿಗೂ ಅದು ಜಾರಿಗೆ ಬಂದಿಲ್ಲ. ಅಲ್ಲದೇ ಲಾಕ್‌ಡೌನ್‌ನಿಂದ ಇದುವರೆಗೆ ವೇತನ ಕೂಡ ಪಾವತಿಸಿಲ್ಲ. ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಹೇಳಿಕೊಂಡಿದ್ದಾರೆ.

‘ಆರ್ಥಿಕ ಮಿತವ್ಯಯದ ನೆಪವೊಡ್ಡಿ ಸರ್ಕಾರಿ ಅತಿಥಿ ಉಪನ್ಯಾಸಕರನ್ನು ಕೈಬಿಡುವುದರ ಕುರಿತು ಸರ್ಕಾರ ಚಿಂತಿಸುತ್ತಿದೆ. ಇದು ಸರಿಯಾದುದಲ್ಲ. ಇಷ್ಟು ದಿನ ಕೆಲಸ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ನಡು ನೀರಿನಲ್ಲಿ ಕೈಬಿಟ್ಟರೆ ಅವರು ಬೀದಿ ಪಾಲಾಗುತ್ತಾರೆ. ತನ್ನ ಈ ಚಿಂತನೆಯಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಿತಿ ಸಂಚಾಲಕರಾದ ಪ್ರಶಾಂತ್‌ ಬಡಿಗೇರ್‌, ಪಂಪಾಪತಿ, ರವಿ, ಅತಿಥಿ ಉಪನ್ಯಾಸಕರಾದ ಕುಸುಮಾ, ಪದ್ಮಜಾ, ಷಣ್ಮುಖಪ್ಪ, ನಾಗಾರ್ಜುನ್‌, ಮಾರುತಿ, ಡಿ. ಬಸವರಾಜ, ದೀಪಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT