ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮೀಸಲಾತಿ ಹೆಚ್ಚಳ: ಸದನ ಒಪ್ಪಿದರೆ ಕೇಂದ್ರಕ್ಕೆ ಶಿಫಾರಸು -ಕೋಟ ಭರವಸೆ

Last Updated 22 ಡಿಸೆಂಬರ್ 2022, 20:45 IST
ಅಕ್ಷರ ಗಾತ್ರ

ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಿಸುವ ಮಸೂದೆಗೆ ಉಭಯ ಸದನಗಳು ಅನುಮೋದನೆ ಕೊಟ್ಟರೆ, ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅಲ್ಲಿಯೂ ಒಪ್ಪಿಗೆ ಪಡೆಯುತ್ತೇವೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಈ ವಿಷಯ ಕುರಿತು ನಿಲುವಳಿ ಸೂಚನೆ ಮಂಡಿಸಿದರು.

ಪರಿಶಿಷ್ಟ ಜಾತಿ/ಪಂಗಡದವರ ಮೀಸಲಾತಿಯನ್ನು ಹೆಚ್ಚಿಸಬೇಕಾದರೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಅದು ಆಗುವುದಕ್ಕೆ ಮುನ್ನ ರಾಜ್ಯ ಸರ್ಕಾರ ತಂದಿರುವ ಸುಗ್ರೀವಾಜ್ಞೆ, ಈ ಮಸೂದೆಗೆ ಕಾನೂನು ತೊಡಕುಗಳಿವೆ. ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ ಎಂದು ಜನರನ್ನು ತಪ್ಪುದಾರಿಗೆ ಎಳೆಯಲು ಮುಂದಾಗಿದ್ದೀರಿ. ಚುನಾವಣೆ ಹೊತ್ತಿನಲ್ಲಿ ದಲಿತ ರಾಜಕಾರಣಕ್ಕೆ ಕೈ ಹಾಕಿ, ಮತ ಸೆಳೆಯುವ ಹುನ್ನಾರ. ಪರಿಶಿಷ್ಟರ ಮತಗಳನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದೀರಿ ಎಂದು ಹರಿಪ್ರಸಾದ್‌ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ, ‘ಮೀಸಲಾತಿ ಹೆಚ್ಚಿಸುವ ನಿರ್ಣಯ ಕೈಗೊಳ್ಳುವ ಮುನ್ನ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿದ್ದೆವು. ಆಗ ನೀವೆಲ್ಲರೂ ಒಪ್ಪಿಕೊಂಡಿದ್ದೀರಿ.
ರಾಜಕಾರಣ ಏನೇ ಇರಬಹುದು. ಅಪರೂಪ ಹಾಗೂ ದಿಟ್ಟವಾದ ನಿಲುವನ್ನು ಸರ್ಕಾರ ಕೈಗೊಂಡಿದೆ. ಮಸೂದೆ ಸದನಕ್ಕೆ ಬಂದಾಗಿ ಚರ್ಚೆ ಮಾಡಿ, ಎರಡೂ ಸದನಗಳಲ್ಲಿ ಒಪ್ಪಿಗೆ ಕೊಡಿ. ಕೇಂದ್ರದಿಂದ ಒಪ್ಪಿಗೆ ಪಡೆಯುವ ಕೆಲಸ ನಮಗೆ ಬಿಡಿ’ ಎಂದು ಅವರು ಹೇಳಿದರು.

ಈ ಹಂತದಲ್ಲಿ ಕಾಂಗ್ರೆಸ್‌– ಬಿಜೆಪಿ ಸದಸ್ಯರು ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದು ನಡೆಯಿತು.

ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಇದರಲ್ಲಿ ನಮಗೆ ರಾಜಕೀಯ ಉದ್ದೇಶವಿಲ್ಲ. ಏಕೆಂದರೆ ನ್ಯಾ. ನಾಗಮೋಹನ ದಾಸ್ ಸಮಿತಿಯನ್ನು ನಾವು ರಚಿಸಿದ್ದಲ್ಲ. ಬಹಳ ವರ್ಷಗಳ ಬೇಡಿಕೆಯನ್ನು ಎಲ್ಲ
ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈಡೇರಿಸುವ ಕೆಲಸ ಮಾಡಿದ್ದೇವೆ. ಸರ್ಕಾರಿ ಆದೇಶ ಹೊರಬಿದ್ದಿದೆ. ಈಗ ಎರಡೂ ಸದನಗಳಲ್ಲಿ ಒಪ್ಪಿಗೆ ಕೊಡಿ. ಕಾನೂನು ಹೋರಾಟವೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಮೂಲಕವೋ ಇದನ್ನು ಜಾರಿ ಮಾಡುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT