ಶುಕ್ರವಾರ, ಮೇ 20, 2022
26 °C
74 ಒಳಪಂಗಡಗಳಿಗೆ ಮೀಸಲಾತಿಗೆ ಮನವಿ * ವಿವಿಧ ಮಠಾಧೀಶರಿಂದ ಸಿಎಂಗೆ ಮನವಿ

ವೀರಶೈವ–ಲಿಂಗಾಯತ ಒಳಪಂಗಡಗಳಿಗೆ ಮೀಸಲು: ವಿವಿಧ ಮಠಾಧೀಶರಿಂದ ಸಿಎಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೀರಶೈವ– ಲಿಂಗಾಯತ ಸಮುದಾಯಕ್ಕೆ ಸೇರಿದ 74 ಒಳಪಂಗಡಗಳಿಗೆ ಮೀಸಲಾತಿ ನೀಡಬೇಕು ಎಂದು ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.

ಸುಮಾರು 20 ಸ್ವಾಮೀಜಿಗಳಿದ್ದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಈ ಸಂಬಂಧ ಮನವಿಯನ್ನು ಅರ್ಪಿಸಿದೆ. ವೀರಶೈವ ಮತ್ತು ಲಿಂಗಾಯತ ಒಳಪಂಗಡಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಎಂದು ಸ್ವಾಮೀಜಿಗಳು ಪ್ರತಿಪಾದಿಸಿದರು.

ವೀರಶೈವ– ಲಿಂಗಾಯತರಲ್ಲಿ 106 ಒಳಪಂಗಡಗಳಿವೆ. ಇವುಗಳಲ್ಲಿ 32 ಒಳಪಂಗಡಗಳು ಒಬಿಸಿಯಡಿ ಇವೆ. ಉಳಿದ 74 ಒಳಪಂಗಡಗಳಿಗೆ ಮೀಸಲಾತಿ ಸಿಕ್ಕಿಲ್ಲ. ಈ ಎಲ್ಲ ಪಂಗಡಗಳಿಗೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ  ನಮ್ಮ ಭಾಗದ ರೈತರು ಮನೆ–ಮಠ, ಜಮೀನನ್ನು ಕಳೆದುಕೊಂಡಿದ್ದಾರೆ. ದಯನೀಯ ಸ್ಥಿತಿಯಲ್ಲಿ ಇದ್ದಾರೆ. ವಿಜಯಪುರ ಜಿಲ್ಲೆ ಬರದ ನಾಡು ಎಂಬ ಹಣೆ ಪಟ್ಟಿ ಕಳಚಿಕೊಳ್ಳಲು ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು. ಚಾಲ್ತಿಯಲ್ಲಿರುವ ಯೋಜನೆಗಳನ್ನು ಬೇಗನೇ ಪೂರ್ಣಗೊಳಿಸಬೇಕು ಎಂದು ಸ್ವಾಮೀಜಿಗಳು ಒತ್ತಾಯಿಸಿದರು.

ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಹೋರಾಟ

ಹೊಸದುರ್ಗ: ‘ಉಪ್ಪಾರರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಕೊಡುವುದೂ ಸೇರಿ ಇನ್ನಿತರ ಶೋಷಿತ, ಧ್ವನಿ ಇಲ್ಲದ ಕೆಲವು ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಾಸಾಂತ್ಯದೊಳಗೆ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟದ ರೂಪುರೇಷೆ ಯೋಜಿಸಲಾಗುವುದು’ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರದಲ್ಲಿ ಮಂಗಳವಾರ ನಡೆದ ಭೂತೇಶ್ವರಸ್ವಾಮಿ ದೇಗುಲ ಪ್ರಾರಂಭೋತ್ಸವದ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಉಪ್ಪಾರರನ್ನು ಎಸ್‌ಟಿಗೆ ಸೇರಿಸಲು ಡಿ.ದೇವರಾಜು ಅರಸು ಅಧಿಕಾರವಧಿಯಲ್ಲಿ ನೇಮಿಸಿದ್ದ ಹಾವನೂರು ಆಯೋಗ ಶಿಫಾರಸು ಮಾಡಿತ್ತು. ನಂತರದಲ್ಲಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಂ.ವೀರಪ್ಪ ಮೋಯ್ಲಿ ಅಧಿಕಾರ ಅವಧಿಯಲ್ಲಿಯೂ ಈ ಬಗ್ಗೆ ಒತ್ತಡ ತರಲಾಗಿತ್ತು. ಆದರೆ, ಯಾವುದೇ ಸರ್ಕಾರಗಳು ನಮಗೆ ನ್ಯಾಯ ಒದಗಿಸಿಲ್ಲ’ ಎಂದು ದೂರಿದರು.

‘ಈಗ ಎಸ್‌ಟಿ ಮೀಸಲಾತಿ ಸೌಲಭ್ಯ ಪಡೆಯಲಿಕ್ಕಾಗಿ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುತ್ತಿದೆ. ಈ ವರದಿ ಸಲ್ಲಿಕೆ ಆದ ತಕ್ಷಣದಲ್ಲಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಕೊಡಬೇಕಾದ ಮೀಸಲಾತಿ ಸೌಲಭ್ಯವನ್ನು ಕೊಡದಿದ್ದರೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕೆಲ ಸಮುದಾಯದ ಮಠಾಧೀಶರು ಮೀಸಲಾತಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಶೋಷಿತರಾಗಿರುವ ಹೆಳವರು, ಬೆಸ್ತರು, ಕುಂಬಾರರು, ದೇವಾಂಗ, ಸವಿತಾ, ಹಡಪದ, ಮಡಿವಾಳ ಸೇರಿ ಇನ್ನಿತರ ತಳಸಮುದಾಯಗಳ ಅಭಿವೃದ್ಧಿಗೆ ಧ್ವನಿಯಾಗಿ ನಿಲ್ಲಲು ರಾಜಕೀಯ ನೇತಾರರು ಇಲ್ಲ. ಇದರಿಂದಾಗಿ ಈ ಸಮುದಾಯಗಳು ಸೌಲಭ್ಯ ವಂಚಿತವಾಗಿವೆ. ಹೀಗಾಗಿ, ಶೋಷಿತ ಸಮುದಾಯಗಳ ಮಠಾಧೀಶರ ಸಮ್ಮುಖದಲ್ಲಿ ಶ್ರೀಮಠದಲ್ಲಿ ಚರ್ಚಿಸಲಾಗುವುದು. ಸಭೆಯ ನಿರ್ಣಯಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು. ಅದಕ್ಕೆ ಸ್ಪಂದಿಸದಿದ್ದರೆ ಪಾದಯಾತ್ರೆ ಅಥವಾ ಸತ್ಯಾಗ್ರಹ ನಡೆಸಲಾಗುವುದು’ ಎಂದು ಹೇಳಿದರು.

ಮಾದಿಗ ಚೈತನ್ಯ ರಥಕ್ಕೆ ಸ್ವಾಗತ

ಶಿರಾ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಹೊರಟಿರುವ ಮಾದಿಗ ಚೈತನ್ಯ ರಥಕ್ಕೆ ಮಂಗಳವಾರ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಸುಪ್ರೀಂಕೋರ್ಟ್ ತೀರ್ಪಿನಂತೆ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಸಮಯದಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಯಂತೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿ ಒಳ‌ಮೀಸಲಾತಿ ನೀಡಬೇಕು. ಇದಕ್ಕೆ ಒತ್ತಾಯಿಸಿ ರಾಜ್ಯದಲ್ಲಿ ಮಾದಿಗ ಚೈತನ್ಯ ರಥ ಸಂಚರಿಸುತ್ತಿದೆ. ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಸಭೆ ನಡೆಸಿ ಮೀಸಲಾತಿ ನೀಡುವಂತೆ ಆಗ್ರಹಿಸಿದರು.

ಹೋರಾಟ ಸಮಿತಿಯ ಸಂಚಾಲಕ ಹೆಣ್ಣೂರು ಲಕ್ಷ್ಮಿನಾರಾಯಣ ಮಾತನಾಡಿ, ಮಾರ್ಚ್‌ 8ರಂದು ಬೆಂಗಳೂರಿನಲ್ಲಿ ಮಾದಿಗ ಮತ್ತು 47 ಜಾತಿಗಳ 10 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಿ ಅನಿರ್ದಿಷ್ಟ ಪ್ರತಿಭಟನೆ ನಡೆಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು