ಸೋಮವಾರ, ಅಕ್ಟೋಬರ್ 26, 2020
20 °C
ಬಹುಮತ ಇದ್ದರೂ ಸಿಗದ ಗದ್ದುಗೆ: ಪ್ರತಿಪಕ್ಷಗಳ ಆಕ್ಷೇಪ

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ: ಅಧಿಕಾರ ಗಾದಿಗೆ ಮೀಸಲಾತಿ ಏಣಿ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಚುನಾವಣೆ ನಡೆದು ಎರಡು ವರ್ಷಗಳ ನಂತರ ಪ್ರಕಟವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯಲ್ಲಿ ‘ರಾಜಕೀಯ ಕೈಚಳಕ’ ಎದ್ದು ಕಾಣುತ್ತಿದೆ. ಬಹಳಷ್ಟು ಕಡೆ ಬಹುಮತ ಇದ್ದರೂ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಅಧಿಕಾರದ ಗಾದಿಗೆ ಏರಲು ಬಿಜೆಪಿ ಮೀಸಲಾತಿ ಏಣಿಯನ್ನು ಬಳಸಿದೆ.

59 ನಗರಸಭೆ, 117 ಪುರಸಭೆ ಹಾಗೂ 100 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿಯ ಬಗ್ಗೆಯೂ ಬಹುತೇಕ ಕಡೆ ಆಕ್ಷೇಪ ವ್ಯಕ್ತವಾಗಿದೆ.

35 ಸದಸ್ಯ ಬಲದ ಹಾಸನ ನಗರಸಭೆಯಲ್ಲಿ ಜೆಡಿಎಸ್ 17 ಸ್ಥಾನ ಹೊಂದಿದ್ದು, ಪಕ್ಷೇತರರನ್ನು ಸೆಳೆದು ಅಧಿಕಾರಕ್ಕೇರುವ ಉಮೇದಿನಲ್ಲಿತ್ತು. ಅದೇ ರೀತಿ ಅರಸೀಕೆರೆ ನಗರಸಭೆಯಲ್ಲಿ 21 ಸ್ಥಾನ ಗೆದ್ದಿರುವ ಜೆಡಿಎಸ್‌ ಸ್ಪಷ್ಟ ಬಹುಮತ ಹೊಂದಿದೆ. ಆದರೆ, ಈ ಎರಡೂ ಕಡೆಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಮೀಸಲಿಡಲಾಗಿದೆ. ಜೆಡಿಎಸ್ ಪಕ್ಷದಲ್ಲಿ ಎಸ್‌ಟಿ ಸದಸ್ಯರು ಇಲ್ಲ. ಬೆಳಗಾವಿ ಜಿಲ್ಲೆಯ ಕುಡಚಿ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದೆ. ಆದರೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ (ಎಸ್‌ಸಿ)ಗೆ‌ ಮೀಸಲಿಡಲಾಗಿದೆ. ಕಾಂಗ್ರೆಸ್ ನಲ್ಲಿ ಎಸ್‌ಸಿ ಸದಸ್ಯರಿಲ್ಲ. ಇಲ್ಲಿ ಬಿಜೆಪಿ ಅನಾಯಾಸವಾಗಿ ಅಧಿಕಾರಕ್ಕೇರಲಿದೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ, ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯಿತಿಗಳಲ್ಲೂ ಬಿಜೆಪಿ ತನ್ನ ಹಾದಿ ಸುಗಮ ಮಾಡಿಕೊಂಡಿದೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಮೀಸಲಾತಿ ಬದಲಾಯಿಸಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಹಾವೇರಿ ಜಿಲ್ಲೆಯ ಸವಣೂರು ಪುರಸಭೆಯಲ್ಲೂ ಇಂತಹದ್ದೇ ತಂತ್ರವನ್ನು ರೂಪಿಸಲಾಗಿದೆ.

ರೋಸ್ಟರ್‌ ಪ್ರಕಾರವೇ ಮೀಸಲಾತಿನಿಗದಿ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ‘ಮೀಸಲಾತಿ ನಿಗದಿಯಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ’ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿರುವುದು ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

‘ಇದು ಅಧಿಕಾರ ದುರುಪಯೋಗದ ಅತಿರೇಕ. ರೋಸ್ಟರ್‌ ನಿಯಮ ಉಲ್ಲಂಘಿಸಿ ಬಹುತೇಕ ಕಡೆ ನಮ್ಮ ಪಕ್ಷ ಅಧಿಕಾರಕ್ಕೇರುವುದನ್ನು ತಪ್ಪಿಸಲಾಗಿದೆ. ಮೀಸಲಾತಿ ನಿಗದಿ ಹೇಗೆ ಆಗಿದೆ ಎಂಬುದಕ್ಕೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಹೇಳಿಕೆಯೇ ಸಾಕ್ಷಿ’ ಎನ್ನುತ್ತಾರೆ ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ.

‘ಹರಿಹರ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದನ್ನು ಹಾಸನ ನಗರಸಭೆಗೆ ನಿಗದಿ ಮಾಡಲಾಗಿದೆ. ಮಾರ್ಚ್‌ 3ರಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ರಾತ್ರೋರಾತ್ರಿ ಮೀಸಲು ಬದಲು ಮಾಡಲಾಗಿದೆ’ ಎಂದು ಜೆಡಿಎಸ್‌ ಮುಖಂಡ, ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸುತ್ತಿದ್ದರೆ, ‘ಇದು ದ್ವೇಷದ ರಾಜಕಾರಣ. ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಹೋರಾಟ ನಡೆಸುತ್ತೇವೆ’ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಮೀಸಲಾತಿ ಬದಲಾಯಿಸಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಹಾವೇರಿ ಜಿಲ್ಲೆಯ ಸವಣೂರ ಪುರಸಭೆಯಲ್ಲೂ ಇಂತಹದ್ದೇ ‘ಕೈಚಳಕ’ ನಡೆದಿದೆ.

ಈ ಅಧಿಕಾರ ದುರುಪಯೋಗದ ಮಾತು ಬಿಜೆಪಿಗಷ್ಟೇ ಸೀಮಿತವಾಗಿಲ್ಲ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪುರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 10 ಸ್ಥಾನ ಹೊಂದಿವೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧ್ಯಕ್ಷ ಸ್ಥಾನ ಪರಿಶಿಷ್ಟ ಗಂಡಕ್ಕೆ ಮೀಸಲಿಡುವ ಮೂಲಕ ಕೇವಲ ಮೂವರು ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಅಧ್ಯಕ್ಷ ಗಾದಿಗೆ ಏರಲು ಅವಕಾಶ ಮಾಡಿಕೊಟ್ಟಿದ್ದರು. ಈಗ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವಂತೆ ಮೀಸಲಾಗಿ ನಿಗದಿಯಾಗಿದೆ.

ಕೆರೂರ: ಬಿಜೆಪಿಯೇ ಅಧಿಕಾರ ವಂಚಿತ

ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯಿತಿಯಲ್ಲಿ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ 12 ಸ್ಥಾನ ಹೊಂದಿದೆ. ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್‌ 8 ಸ್ಥಾನಗಳನ್ನು ಹೊಂದಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನಲ್ಲಿ ಮಾತ್ರ ಈ ವರ್ಗದ ಸದಸ್ಯೆ ಇದ್ದಾರೆ. ಬಹುಮತ ಇದ್ದರೂ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಲಿದೆ.

ಕಾಂಗ್ರೆಸ್‌–ಜೆಡಿಎಸ್ ಶಾಸಕರಿಗೆ ‘ಹಿನ್ನಡೆ’

ಜೆಡಿಎಸ್‌ ಶಾಸಕರಿರುವ ಮೈಸೂರು ಜಿಲ್ಲೆಯ ತಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೂರು ಪುರಸಭೆಯಲ್ಲಿ ಜೆಡಿಎಸ್ ಬಹುಮತ ಗಳಿಸಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದೆ. ಆದರೆ ಜೆಡಿಎಸ್‌ನಲ್ಲಿ ಈ ಮೀಸಲಾತಿಯಿಂದ ಗೆದ್ದವರು ಯಾರೊಬ್ಬರೂ ಇಲ್ಲ. ಇಲ್ಲಿ ಅನಾಯಾಸವಾಗಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಬಹುದು.

ಇದೇ ರೀತಿ ಕಾಂಗ್ರೆಸ್ ಶಾಸಕರಿರುವ ಎಚ್‌.ಡಿ.ಕೋಟೆ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದೆ. ಆದರೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ ಯಾರೊಬ್ಬರೂ ಗೆದ್ದಿಲ್ಲ. ಜೆಡಿಎಸ್ ಇಲ್ಲಿ ನಿರಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

‘ಕೆಲವರ ಅನುಕೂಲಕ್ಕೆ ತಪ್ಪು ನಿರ್ಧಾರ‘

‘ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷ ಕಳೆಯುತ್ತಾ ಬಂದರೂ ಚುನಾಯಿತ ಸದಸ್ಯರಿಗೆ ಈವರೆಗೆ ಅಧಿಕಾರ ದೊರಕಿಲ್ಲ. ಈಗ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಯಲ್ಲಿ ಆಡಳಿತ ಪಕ್ಷದ ಶಾಸಕರು, ಮುಖಂಡರ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ಮಾಡಿರುವುದು ಸರಿಯಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಪ್ರತಿಕ್ರಿಯಿಸಿದರು.

ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ಅನುಕೂಲಕ್ಕೆ ನಿಯಮಗಳನ್ನು ಉಲ್ಲಂಘಿಸಿ ಮೀಸಲಾತಿ ನಿಗದಿ ಮಾಡಬಾರದು. ರಾಜ್ಯ ಸರ್ಕಾರ ಈಗ ಮಾಡಿರುವ ತಪ್ಪುಗಳಿಂದ ನ್ಯಾಯಾಲಯದಲ್ಲಿ ಈ ವಿವಾದ ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ. ತಪ್ಪುಗಳನ್ನು ಸರಿಪಡಿಸಿ, ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಅಧಿಕಾರ ಹಿಡಿಯಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

‘ಅಭಿವೃದ್ಧಿ ಕುಂಠಿತವಾಗುವುದು ನಿಶ್ಚಿತ‘

‘ಮೀಸಲಾತಿ ನಿಗದಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಸರ್ಕಾರ ಹಲವು ಕಡೆಗಳಲ್ಲಿ ಬಹುಮತ ಹೊಂದಿರುವ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ನಡೆಸಿದೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರೇ ಇದನ್ನು ಬಹಿರಂಗ ಪಡಿಸಿದ್ದಾರೆ. ಸರ್ಕಾರದ ಈ ನಡೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರಕವಾಗಲಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಸರ್ಕಾರದ ಬೆಂಬಲದಿಂದ ಅಲ್ಪಮತ ಹೊಂದಿರುವ ಪಕ್ಷಕ್ಕೆ ಅಧಿಕಾರ ದೊರಕಬಹುದು. ಆದರೆ, ಬಹುಮತ ಹೊಂದಿರುವ ಪಕ್ಷದ ಸದಸ್ಯರು ಪೂರ್ಣ ಅವಧಿಗೆ ಸಭೆ ಬಹಿಷ್ಕರಿಸುವುದು, ಆಡಳಿತಾತ್ಮಕ ನಿರ್ಧಾರಗಳನ್ನು ತಿರಸ್ಕರಿಸುವಂತಹ ತೀರ್ಮಾನಕ್ಕೆ ಬಂದರೆ ಆ ಪ್ರದೇಶದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಲಿದೆ. ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಹೇಳಿದರು.

‘ಸರ್ಕಾರ ಹಸ್ತಕ್ಷೇಪ ಮಾಡಿಲ್ಲ‘

‘ಹೈಕೋರ್ಟ್‌ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ ನಿಗದಿ ಮಾಡಲಾಗಿದೆ. ಈ ವಿಚಾರದಲ್ಲಿ ರಾಜ್ಯಸರ್ಕಾರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ’ ಎಂದು ಪೌರಾಡಳಿತ ಸಚಿವ ಕೆ.ಸಿ. ನಾರಾಯಣಗೌಡ ಪ್ರತಿಕ್ರಿಯಿಸಿದರು. ‘ಮೀಸಲಾತಿ ಪುನರಾವರ್ತನೆ ಆಗಬಾರದು ಎಂದು ನ್ಯಾಯಾಲಯ ಸೂಚಿಸಿತ್ತು. ಅದನ್ನು ಪಾಲಿಸಿಕೊಂಡು, ರೋಸ್ಟರ್‌ ಪ್ರಕಾರ ನಿಗದಿ ಮಾಡಲಾಗಿದೆ. ಗೂಳಿಹಟ್ಟಿ ಶೇಖರ್‌ ಆರೋಪ ವೈಯಕ್ತಿಕವಾದುದು. ಪಕ್ಷದ ನಾಯಕರು ಅವರೊಂದಿಗೆ ಮಾತನಾಡಿ, ಪರಿಹರಿಸಿದ್ದಾರೆ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು