ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲದು: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ
Last Updated 30 ಮಾರ್ಚ್ 2021, 11:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ ಕಾರಣ ತಾತ್ಕಾಲಿಕವಾಗಿ ಧರಣಿ ನಿಲ್ಲಿಸಲಾಗಿದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿನ ರಂಭಾಪುರಿ ಸಮುದಾಯ ಭವನದಲ್ಲಿ ಮಂಗಳವಾರ ತಾಲ್ಲೂಕು ಪಂಚಮಸಾಲಿ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ‘ಶರಣು ಶರಣಾರ್ಥಿ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದ ಪಂಚಲಕ್ಷ ಪಾದಯಾತ್ರೆ ಸಂದರ್ಭದಲ್ಲಿ ಬೆಂಬಲ ವ್ಯಕ್ತಿಪಡಿಸಿದವರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದ ಅವರು, ‘ಮುಖ್ಯಮಂತ್ರಿ ಮೀಸಲಾತಿ ನೀಡಲು ಮನಸ್ಸು ಮಾಡಿದ್ದಾರೆ. ಏಕೆಂದರೆ ಪಂಚಮಸಾಲಿ ಸಮಾಜದ ಬೆಂಬಲ ಇಲ್ಲದೆ ಸರ್ಕಾರ ನಡೆಯದು ಎಂಬುದು ಅವರಿಗೂ ಚೆನ್ನಾಗಿ ಗೊತ್ತಿದೆ. ನಮ್ಮ ಬೇಡಿಕೆ ಬೇಗನೇ ಈಡೇರಬೇಕಾದರೆ ಪಂಚಮಸಾಲಿ ಸಮಾಜದ ಶಾಸಕರು, ಸಂಸದರು ಒತ್ತಡ ಹಾಕಬೇಕು. ಒಂದು ವೇಳೆ ಸರ್ಕಾರ ಮೀಸಲಾತಿ ನೀಡಲು ಹಿಂದೇಟು ಹಾಕಿದರೆ ಅ.15ರಿಂದ ಮತ್ತೆ ಧರಣಿ ಪ್ರಾರಂಭಿಸಲಾಗುವುದು. ಈ ಬಾರಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಧರಣಿಯಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದರು.

ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಪಂಚಮಸಾಲಿ ಸಮಾಜದಲ್ಲಿ ಯಾವುದೇ ಒಡಕು ಇಲ್ಲ. 712 ಕಿ.ಮೀ. ಪಾದಯಾತ್ರೆಯಲ್ಲಿ ಭಾಗವಹಿಸಿದ ಮತ್ತು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಜನರೇ ಇದಕ್ಕೆ ಸಾಕ್ಷಿ. ಸ್ವಾಮೀಜಿ ಮೀಸಲಾತಿ ಸಿಗುವವರೆಗೆ ಹೋರಾಟ ಮಾಡಲು ಸಿದ್ಧರಿದ್ದಾರೆ. ಸಮಾಜದವರು ಅವರ ಜತೆಗೆ ಕೈಜೋಡಿಸಬೇಕು’ ಎಂದ ಹೇಳಿದರು.

‘ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸಮಾವೇಶಕ್ಕೂ ಬಂದಿದ್ದು ನಮಗೆಲ್ಲ ಆನೆ ಬಲ ನೀಡಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಮಾತನಾಡಿ, ‘ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಉತ್ತರ ಕರ್ನಾಟಕದ ಜನರ ಪಾಲು ದೊಡ್ಡದು ಎಂಬುದನ್ನು ಸರ್ಕಾರ ಮರೆಯಬಾರದು. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಬಿ.ಎಂ.ಪಾಟೀಲ, ತಾಲ್ಲೂಕು ಪಂಚಮಸಾಲಿ ಸೇವಾ ಸಮಿತಿ ಅಧ್ಯಕ್ಷ ರಮೇಶ ಹಾಳದೋಟದ, ಎಂ.ಆರ್.ಪಾಟೀಲ, ಮಂಜುನಾಥ ಮಾಗಡಿ, ಚೆನ್ನಪ್ಪ ಜಗಲಿ, ಸುನೀಲ ಮಹಾಂತಶೆಟ್ಟರ, ಬಸವರಾಜ ಹೊಗೆಸೊಪ್ಪಿನ, ಬಸವೇಶ ಮಹಾಂತಶೆಟ್ಟರ, ನಾಗರಾಜ ಚಿಂಚಲಿ, ಸಂತೋಷ ಜಾವೂರ, ಈರಣ್ಣ ಕಟಗಿ, ಬಿ.ಎಸ್. ಹರ್ಲಾಪುರ, ಡಿ.ವೈ.ಹುನಗುಂದ, ಮಾಲಾದೇವಿ ದಂಧರಗಿ, ಸುಲೋಚನಾ ಜವಾಯಿ, ಶಿವನಗೌಡ ಪಾಟೀಲ, ವಿಜಯ ಮೆಕ್ಕಿ ಇದ್ದರು.

ಎಂ.ಎಸ್. ಚಾಕಲಬ್ಬಿ ಸ್ವಾಗತಿಸಿದರು. ಎಸ್.ಎಫ್.ಆದಿ ನಿರೂಪಿಸಿದರು. ಎಲ್.ಎಸ್.ಅರಳಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಪಾದಯಾತ್ರೆಗೆ ಸಹಾಯ ಸಹಕಾರ ನೀಡಿದವರಿಗೆ ಸನ್ಮಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT