ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನೀತಿಯ ಪುನರ್ ರಚನೆ ಅಗತ್ಯ: ನ್ಯಾ. ಎಚ್‌.ಎನ್.ನಾಗಮೋಹನದಾಸ್

ಪ್ರಜಾವಾಣಿ ಫೇಸ್‌ಬುಕ್‌ ಲೈವ್ ಚರ್ಚೆಯಲ್ಲಿ ನ್ಯಾ. ಎಚ್‌.ಎನ್.ನಾಗಮೋಹನದಾಸ್ ಅಭಿಮತ
Last Updated 8 ಫೆಬ್ರುವರಿ 2021, 16:51 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪಟ್ಟಿಯಲ್ಲಿ ಇದ್ದರೂ ಆ ಸೌಲಭ್ಯ ಪಡೆಯಲು ಸಾಧ್ಯವೇ ಆಗದ ಜಾತಿಗಳು ಇವೆ. ಅವುಗಳಿಗೆ ನ್ಯಾಯ ಒದಗಿಸಲು ಮತ್ತು ಮೀಸಲಾತಿಯ ಎಲ್ಲಾ ಗೊಂದಲ ಸರಿಯಾಗಬೇಕೆಂದರೆ ಮೀಸಲಾತಿ ನೀತಿಯ ಪುನರ್ ರಚನೆ ಒಂದೇ ದಾರಿ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನದಾಸ್ ಪ್ರತಿಪಾದಿಸಿದರು.

‘ಪ್ರಜಾವಾಣಿ’ ಏರ್ಪಡಿಸಿದ್ದ ‘ಮೀಸಲಾತಿ–ಹೋರಾಟದ ಹೊನಲು’ ಕುರಿತ ಫೇಸ್‌ಬುಕ್ ಲೈವ್ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು, ಪರಿಶಿಷ್ಟ ಪಂಗಡದಲ್ಲಿ 53 ಜಾತಿಗಳಿಗೆ, ಹಿಂದುಳಿದ ವರ್ಗಗಳಲ್ಲಿ 207 ಜಾತಿಗಳಿವೆ. 71 ವರ್ಷಗಳ ಅವಧಿಯಲ್ಲಿ ಒಂದು ಹಿಡಿಯಷ್ಟು ಜನರಿಗೆಮೀಸಲಾತಿಯಿಂದ ಅನುಕೂಲ ಆಗಿದೆ. ಆದರೆ, ಅದೇ ವರ್ಗಗಳಲ್ಲಿರುವ ಅಲೆಮಾರಿ, ಅರೆ ಅಲೆಮಾರಿ, ಕೊಳಚೆ ನಿವಾಸಿಗಳು, ದೇವದಾಸಿ ಸಮುದಾಯ, ಸಫಾಯಿ ಕರ್ಮಚಾರಿಗಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವೇ ಸಿಗದ ಕಾರಣ ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಹಂತಕ್ಕೂ ಬರಲು ಅವರಿಗೆ ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ವಂಚನೆ ಯಾರಿಗೆ ಆಗಿದೆ ಎಂಬುದರ ವೈಜ್ಞಾನಿಕ ಅಧ್ಯಯನಗಳು ನಡೆಯಬೇಕಿದೆ. ಆಗ ಮಾತ್ರ ಬಲಿಷ್ಠರ ಪ್ರಭಾವ ಕಡಿಮೆಯಾಗಲಿದೆ. ಕೆನೆಪದರ ಬೇಕೇ? ಬೇಡವೇ? ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಒಳಮೀಸಲಾತಿ ಕೂಗಿಗೂ ಸ್ಪಂದನೆ ದೊರೆತಿಲ್ಲ. ಬಡ್ತಿ ಮೀಸಲಾತಿ ವಿಷಯ ಗೊಂದಲದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬೇಕು ಎಂಬ ಕೂಗು ದೊಡ್ಡದಾಗಿದೆ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೀಸಲಾತಿ ನೀತಿಯ ಪುನರ್‌ರಚನೆ ಅಗತ್ಯ’ ಎಂದು ಹೇಳಿದರು.

‘ಈ ನೀತಿ ಪುನರ್‌ರಚನೆ ಆಗದಿದ್ದರೆ ಪಟ್ಟಿಯಿಂದ ಮತ್ತೊಂದು ಪಟ್ಟಿಗೆ ಜಿಗಿಯುವ ಹೋರಾಟಗಳು ನಿರಂತರವಾಗಿ ನಡೆಯಲಿವೆ. ಈ ಬಗ್ಗೆ ಸಮಾಜ ಮತ್ತು ಸರ್ಕಾರಗಳು ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಮೀಸಲಾತಿಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಕುರುಬ ಸಮುದಾಯದಲ್ಲಿ ಶೇ 80ರಷ್ಟು ಬಡವರಿದ್ದಾರೆ. ಪಂಚಮಸಾಲಿ ಸಮುದಾಯದಲ್ಲಿ ಶೇ 90ರಷ್ಟು ಕೃಷಿಕರಿದ್ದಾರೆ. ಕೃಷಿ ಬಿಕ್ಕಟ್ಟು ದೇಶವನ್ನು ಕಾಡುತ್ತಿದೆ. ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ಯಾವುದ್ಯಾವುದೋ ವಿಷಯಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗುತ್ತಿದೆ. ಬದುಕಿಗೆ ಸಂಬಂಧಿಸಿದ ಈ ಮಹತ್ವದ ವಿಷಯದ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು’ ಎಂದರು.

ಲಾಭಕೋರತನ ಇರಬಾರದು: ಮಂಗ್ಳೂರ ವಿಜಯ

‘ಮೀಸಲಾತಿಗೆ ಇರುವ ಎರಡು ಮುಖಗಳಲ್ಲಿ ಋಣಾತ್ಮಕ ಅಂಶ ಎಂದರೆ ಮೀಸಲಾತಿ ಜೊತೆಗೆ ಲಾಭಕೋರತನ ಶಾಮೀಲಾಗಿರುವುದು. ಲಾಭದ ಆಸೆಗೆ ಒಂದು ಪಟ್ಟಿಯಿಂದ ಮತ್ತೊಂದು ಪಟ್ಟಿಗೆ ಜಿಗಿಯುವ ಹೋರಾಟಗಳು ನಡೆಯುತ್ತಿವೆ’ ಎಂದು ಸಾಮಾಜಿಕ ಅಧ್ಯಯನಕಾರ, ಲೇಖಕ ಮಂಗ್ಳೂರ ವಿಜಯ ಅಭಿಪ್ರಾಯಪಟ್ಟರು.

‘ಪರಿಶಿಷ್ಟ ಪಂಗಡ ಅಥವಾ 2ಎ ಪಟ್ಟಿಯಲ್ಲಿ ಬಲಹೀನ ಜಾತಿಗಳಿವೆ. ಅಲ್ಲಿಗೆ ಜಿಗಿದರೆ ಅವರೊಂದಿಗೆ ಪೈಪೋಟಿ ನಡೆಸಿ ಲಾಭ ಗಳಿಸಬಹುದು ಎಂಬ ಆಶಯ ಈ ಹೋರಾಟಗಳಲ್ಲಿ ಇದ್ದಂತೆ ಕಾಣಿಸುತ್ತಿದೆ. ನಾಲ್ಕು ಜನರ ಒಂದು ಗುಂಪಿಗೆ ಮೀಸಲಾತಿ ನೀಡಿದರೆ, ಆ ನಾಲ್ವರಲ್ಲಿ ಬಲಿಷ್ಠ ಇದ್ದವರು ಗರಿಷ್ಠ ಲಾಭ ಪಡೆದುಕೊಳ್ಳುತ್ತಾರೆ. ಹೀಗಾಗಿಯೇ ಮೀಸಲಾತಿ ಪಟ್ಟಿ ಇರುವ ಅನೇಕ ಸಮುದಾಯಗಳು ಇನ್ನೂ ಶೋಚನೀಯ ಸ್ಥಿತಿಯಲ್ಲಿ ಇವೆ’ ಎಂದರು.

‘ಶತಮಾನಗಳಿಂದ ಇದ್ದ ಅಸಮಾನತೆ ಸರಿಪಡಿಸುವ ಉದ್ದೇಶದಿಂದ ಅಷ್ಟೇ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಅದನ್ನು ದುಂಡಾವರ್ತಿಯಿಂದ ದಬಾಯಿಸಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ರಾಜ್ಯಕ್ಕೂ, ಮನುಷ್ಯತ್ವಕ್ಕೂ ಮತ್ತು ಅಧಿಕಾರದಲ್ಲಿ ಇರುವವರಿಗೂ ಮರ್ಯಾದೆ ತರುವುದಿಲ್ಲ. ಹಣ ಮತ್ತು ಅಧಿಕಾರ ಸ್ಥಾನಗಳ ಮೇಲೆ ಕಣ್ಣಿಟ್ಟು ಹೋರಾಟಗಳನ್ನು ನಡೆಸಬಾರದು’ ಎಂದು ಪ್ರತಿಪಾದಿಸಿದರು.‌

‘ಈ ಹೋರಾಟ ನಡೆಸುತ್ತಿರುವ ಮುಂಚೂಣಿ ಸ್ಥಾನದಲ್ಲಿರುವ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಲ್ಲಿ ನಾನು ಕೇಳುವ ಪ್ರಶ್ನೆ ಎಂದರೆ, ನೀವು ಸೇರಲು ಬಯಸುತ್ತಿರುವ ಪಟ್ಟಿಗೆ ಹೋದ ಬಳಿಕ ಅಲ್ಲಿರುವ ಸಮುದಾಯಗಳೂ ಒಂದೇ ಎಂದು ಒಪ್ಪಿಕೊಳ್ಳಲು ಸಾಧ್ಯವೇ?, ಒಟ್ಟಿಗೆ ಕುಳಿತು ಊಟ ಮಾಡಲು ಸಾಧ್ಯವೇ?, ಒಂದೇ ಪಟ್ಟಿಯಲ್ಲಿರುವ ಜಾತಿಗಳ ನಡುವೆ ಮದುವೆ ಮಾಡಿಸಲು ಸಾಧ್ಯವೇ?, ಅಷ್ಟರ ಮಟ್ಟಿಗೆ ಸಮುದಾಯದ ಜನರನ್ನು ವೈಚಾರಿಕವಾಗಿ ಬದಲಿಸುವ ಆಲೋಚನೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಮನವಿ ಮಾಡಿದರು.

‘ಮೀಸಲಾತಿಯನ್ನು ನ್ಯಾಯಾಂಗ, ಶಾಸಕಾಂಗ ಮತ್ತು ಈ ಸಮಾಜ ಕೇವಲ ಅಕ್ಷರಗಳಾಗಿ ನೋಡಬಾರದು. ಅದರ ಆಶಯ ಏನು ಎಂಬುದನ್ನು ವಿಶ್ಲೇಷಿಸಬೇಕು. ಈ ರೀತಿಯ ಆಲೋಚನೆಗಳು ಸಾಮಾನ್ಯ ಜನರು, ಅದರಲ್ಲೂ ಯುವ ಸಮೂಹದಲ್ಲಿ ಬೆಳೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT