ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲು: ದಲಿತೋತ್ಸವದಲ್ಲಿ ನಿಲುವು

ನಾನು ವರ್ಗೀಕರಣದ ವಿರೋಧಿಯಲ್ಲ: ಜಿ.ಪರಮೇಶ್ವರ್
Last Updated 26 ಡಿಸೆಂಬರ್ 2022, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಒಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಹೊಂದಿರುವ ನಿಲುವನ್ನು ಚಿತ್ರದುರ್ಗದಲ್ಲಿ ಜ.8ರಂದು ನಡೆಯಲಿರುವ ದಲಿತೋತ್ಸವದಲ್ಲಿ ಪ್ರಕಟಿಸಲಾಗುವುದು’ ಎಂದು ಕಾಂಗ್ರೆಸ್ ಪ್ರಣಾಳಿಕೆ ಹಾಗೂ ನೀತಿ ನಿರೂಪಣಾ ಸಮಿತಿಯ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ 15 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಹೋರಾಟದ ಸ್ಥಳಕ್ಕೆ ನಾನು ಬಂದಿರುವುದು ಬಹಳಷ್ಟು ಜನರಿಗೆ ಆಶ್ಚರ್ಯ ಆಗಿರಬಹುದು. ನನ್ನ ವೈಯಕ್ತಿಕ ಬದ್ಧತೆ, ಪಕ್ಷದ ತೀರ್ಮಾನ ಮತ್ತು ನಮಗಿರುವ ಆತಂಕವನ್ನು ನಿಮ್ಮ ಮುಂದಿಡಲು ಬಂದಿದ್ದೇನೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ, ನಾನೂ ಸಚಿವನಾಗಿದ್ದೆ. ಪರಿಶಿಷ್ಟ ಜಾತಿ ಮತ್ತು ಪಂಗಡದರಿಗೆ ದೊರೆತಿರುವ ಶಿಕ್ಷಣ, ಉದ್ಯೋಗ ಸೇರಿ ಸ್ಥಿತಿಗತಿ ಅಧ್ಯಯನ ನಡೆಸುವಂತೆ ಸಂಪುಟದಲ್ಲಿದ್ದ ಸಮುದಾಯದ ಸಚಿವರೆಲ್ಲರೂ ಪ್ರಸ್ತಾಪಿಸಿದ್ದೆವು. ಎ.ಜೆ.ಸದಾಶಿವ ಆಯೋಗ ರಚನೆ ಸಂದರ್ಭದಲ್ಲೂ ಪ್ರಮುಖ ಪಾತ್ರ ವಹಿಸಿದ್ದೆವು’ ಎಂದು ಹೇಳಿದರು.

‘ನಾನು ಒಳ ಮೀಸಲಾತಿ ವಿರೋಧಿ ಅಲ್ಲ. ಆದರೆ, ವಿರೋಧಿ ಎಂಬಂತೆ ಬಿಂಬಿಸಲಾಗಿತ್ತು. ನಮ್ಮ ಸರ್ಕಾರವೂ ಸೇರಿ ಎಲ್ಲಾ ಸರ್ಕಾರಗಳೂ ಸದಾಶಿವ ಆಯೋಗದ ವರದಿ ಮಂಡಿಸದೆ ವಿಳಂಬ ಮಾಡಿವೆ. ಇದನ್ನು ಒಪ್ಪಿಕೊಳ್ಳುತ್ತೇನೆ. ಎಚ್‌.ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ವಿಧಾನಸಭೆಯ ಮುಂದಿನ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ವಿಷಯವನ್ನೂ ಸೇರಿಸಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಅಂಬಣ್ಣ ಅರೋಲಿಕರ್, ‘ಒಳ ಮೀಸಲಾತಿ ಜಾರಿ ಸಂಬಂಧ ಆಯೋಗ ರಚಿಸಲು ಹೋರಾಟ ಮಾಡಿದ್ದೆವು. ಆಯೋಗಕ್ಕೆ ಅನುದಾನ ಒದಗಿಸಲು ಹೋರಾಟ ಮಾಡಿದೆವು. ಈಗ ಆಯೋಗದ ವರದಿ ಜಾರಿಗೆ ಹೋರಾಟ ಮಾಡುತ್ತಿದ್ದೇವೆ. ಇದು ನಮ್ಮ ದುರಂತ’ ಎಂದರು.

‘ಒಳ ಮೀಸಲಾತಿಗಾಗಿ ಅಧಿವೇಶನದಲ್ಲಿ ಒತ್ತಾಯಿಸುವುದು ಪ್ರತಿಪಕ್ಷದ ಜವಾಬ್ದಾರಿ. ಅವರ ಕೆಲಸವನ್ನು ಬೀದಿಯಲ್ಲಿ ನಿಂತು ನಾವು ಮಾಡುತ್ತಿದ್ದೇವೆ. ಅಧಿವೇಶನದಲ್ಲಿ ಬೇರೆಯವರು ಪ್ರಸ್ತಾಪಿಸಿದರೆ ಮಾತನಾಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವರು ಹೇಳಿಕೆ ನೀಡಿದ್ದಾರೆ. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ’ ಎಂದು ಆರೋಪಿಸಿದರು.

‘ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬರಲಿದೆಯೇ ಎಂಬುದನ್ನು ಡಿ.30ರ ತನಕ ಕಾಯುತ್ತೇವೆ. ಚರ್ಚೆಗೆ ತೆಗೆದುಕೊಳ್ಳದಿದ್ದರೆ ದೊಡ್ಡ ಮಟ್ಟದಲ್ಲಿ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT