ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: ಕಾಲಾವಕಾಶ ಕೇಳಿದ ಸರ್ಕಾರ

ಪಂಚಮಸಾಲಿಗೆ ಪ್ರವರ್ಗ 2ಎ ಮೀಸಲಾತಿಗಾಗಿ ಧರಣಿ ಮುಂದುವರಿಕೆ
Last Updated 24 ಫೆಬ್ರುವರಿ 2021, 21:24 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಪರಿಷ್ಕರಿಸಬೇಕೆಂಬ ಬೇಡಿಕೆ ಈಡೇರಿಸಲು ಸರ್ಕಾರ ಸಮಯಾವಕಾಶ ಕೋರಿದೆ.

ಹೋರಾಟದ ನೇತೃತ್ವ ವಹಿಸಿ, ಧರಣಿ ನಡೆಸುತ್ತಿರುವ ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಬುಧವಾರ ಭೇಟಿಯಾದ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಸಣ್ಣ ಕೈಗಾರಿಕೆ ಸಚಿವ ಸಿ.ಸಿ. ಪಾಟೀಲ ಅವರು, ಬೇಡಿಕೆ ಈಡೇರಿಸಲು ಸ್ವಲ್ಪ ಅವಕಾಶ ಕೊಡಿ ಎಂದು ಮನವಿ ಮಾಡಿದರು.

‘ಹಲವು ಬಾರಿ ಕಾಲಾವಕಾಶ ನೀಡಲಾಗಿದೆ. ಎಷ್ಟು ದಿನದೊಳಗೇ ಮೀಸಲಾತಿ ಕೊಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿ. ನಂತರವೇ ಹೋರಾಟ ಕೈಬಿಡುತ್ತೇವೆ’ ಎಂದೂ ಸ್ವಾಮೀಜಿ ಪುನರುಚ್ಚರಿಸಿದರು.

‘ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಕಳಿಸಬೇಕು. ಆ ವರದಿ ನಂತರವೇ ಮೀಸಲಾತಿ ಪ್ರಕಟಿಸಬೇಕಾಗುತ್ತದೆ. ಇಂತಿಷ್ಟೇ ದಿನಗಳಲ್ಲಿ ವರದಿ ನೀಡಿ ಎಂದು ಹೇಳುವ ಅಧಿಕಾರ ನಮ್ಮ ಕೈಯಲ್ಲಿಲ್ಲ’ ಎಂದು ಬೊಮ್ಮಾಯಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ನಗರದಲ್ಲಿ ಬುಧವಾರವೂ ಧರಣಿ ನಡೆಸಿದ ಸ್ವಾಮೀಜಿ, ‘ನ್ಯಾಯ ಮಾರ್ಗದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಮಾ.4ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಆ ನಂತರ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಪುನರುಚ್ಚರಿಸಿದರು.

‘ಮೀಸಲಾತಿಗಾಗಿ ನಡೆಯುತ್ತಿರುವ ಧರಣಿಯಿಂದ ನಾನು ಬೇಕಿದ್ದರೆ ಹಿಂದೆ ಸರಿಯುತ್ತೇನೆ. ನಮ್ಮ ಸಮುದಾಯ
ದವರೇ ಆದ ಸಚಿವರಾದ ಮುರುಗೇಶ ನಿರಾಣಿ ಮತ್ತು ಸಿ.ಸಿ.ಪಾಟೀಲ ಅವರೇ ಸಮುದಾಯಕ್ಕೆ ನ್ಯಾಯ ಕೊಡಿಸಲಿ’ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

‘ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ಪಕ್ಷಾತೀತ ಹೋರಾಟ.ಇಬ್ಬರು ಸಚಿವರು ಕೂಡ ಸಮಾವೇಶಕ್ಕೆ ಬಂದು ನಂತರ ಏಕೆ ಉಲ್ಟಾ ಹೊಡೆದಿದ್ದಾರೋ ಗೊತ್ತಿಲ್ಲ. ಅವರು ರಾಜಕೀಯ ಹೋರಾಟ ಎನ್ನುವುದನ್ನು ನಿಲ್ಲಿಸಲಿ. ಅವರೇ ಸರ್ಕಾರದೊಂದಿಗೆ ಮಾತನಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನ್ಯಾಯ ಕೊಡಿಸಲಿ’ ಎಂದರು.

‘ನಾನು ಮಹಾಸಭಾದ ಸ್ವಯಂಘೋಷಿತ ರಾಷ್ಟ್ರೀಯ ಅಧ್ಯಕ್ಷನಲ್ಲ. ಸ್ವಾಮೀಜಿಯವರ ಸಮ್ಮುಖದಲ್ಲೇ 2017ರಲ್ಲಿ ಅಧ್ಯಕ್ಷನಾದವನು’ ಎಂದೂ ಹೇಳಿದರು.

ಶಾಸಕರಾದ ಅರವಿಂದ ಬೆಲ್ಲದ, ಸಿದ್ದು ಸವದಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕರಾದ ಎಂ.ಪಿ. ನಾಡಗೌಡ, ಎಚ್. ಎಂ. ಚಂದ್ರಶೇಖರಪ್ಪ, ಶಶಿಕಾಂತ ಅಕ್ಕಪ್ಪನಾಯಕ, ರಾಜ್ಯ ಪಂಚಸೇನೆ ಅಧ್ಯಕ್ಷ ಡಾ.ಬಿ.ಎಸ್. ಪಾಟೀಲ, ಮುಖಂಡರಾದ ಡಾ. ವಿಜಯಮಹಾಂತೇಶ ಬಾರಿಗಿಡದ, ವಿಜಯ್ ಪೂಜಾರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT