ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಕುಟುಂಬದವರಿಗೆ ನಿರ್ಬಂಧ

ನೌಕರರ ನಡತೆ ನಿಯಮದ ಕರಡು ಬಿಡುಗಡೆ
Last Updated 27 ಅಕ್ಟೋಬರ್ 2020, 20:17 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರರು ವರದಕ್ಷಿಣೆ ತೆಗೆದುಕೊಳ್ಳುವಂತಿಲ್ಲ, ಪತಿ ಅಥವಾ ಪತ್ನಿ ಇದ್ದಲ್ಲಿ ಮತ್ತೊಂದು ಮದುವೆ ಆಗುವಂತಿಲ್ಲ. ಪತ್ರಿಕೆಗಳಿಗೆ ಅನುಮತಿ ಇಲ್ಲದೆ ಲೇಖನಗಳನ್ನು ಬರೆಯುವಂತಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವುಗಳ ಒಡನಾಟ ಹೊಂದಿದ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಿಲ್ಲ!

ರಾಜ್ಯ ಸರ್ಕಾರವು ‘ಕರ್ನಾಟಕ ನಾಗರಿಕ ಸೇವಾ (ನಡತೆ)2020’ ಕರಡನ್ನು ಬಿಡುಗಡೆ ಮಾಡಿದ್ದು, ಅದರ ಪ್ರಮುಖ ಅಂಶಗಳಿವು. ಎಲ್ಲ ನೌಕರರಿಗೂ ಇದು ಅನ್ವಯವಾಗಲಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದರೆ 15 ದಿನಗಳಲ್ಲಿ ಸಲ್ಲಿಸಬಹುದು.

ಪ್ರಮುಖ ಅಂಶಗಳು:

* ಸರ್ಕಾರಕ್ಕೆ ಸಂಪೂರ್ಣ ನೀತಿ ನಿಷ್ಠೆ ಹೊಂದಿರಬೇಕು. ರಾಜಕೀಯವಾಗಿ ತಟಸ್ಥವಾಗಿರಬೇಕು. ಮತ್ತು ಸಾರ್ವಜನಿಕರೊಂದಿಗೆ ವಿಧೇಯರಾಗಿ ನಡೆದುಕೊಳ್ಳಬೇಕು.

* ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧ ಹೊಂದಿದ ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗಿರಬಾರದು. ಅವುಗಳ ಜತೆ ಸಂಬಂಧ ಹೊಂದಿರಬಾರದು.

* ರಾಜಕೀಯ ಚಳವಳಿ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಅವುಗಳಿಗೆ ವಂತಿಗೆಯನ್ನು ಸಂಗ್ರಹಿಸಬಾರದು ಮತ್ತು ಕೊಡಬಾರದು.

* ಕಾನೂನು ಬದ್ಧ ಸರ್ಕಾರವನ್ನು ಉರುಳಿಸುವ ಪ್ರತ್ಯಕ್ಷ ಅಥವಾ ಪರೋಕ್ಷ ಚಳವಳಿಗಳಲ್ಲಿ ಭಾಗವಹಿಸಬಾರದು. ನೌಕರರ ಕುಟುಂಬದ ಸದಸ್ಯರೂ ಭಾಗವಹಿಸಬಾರದು.

* ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಬಾರದು. ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಬಾರದು.

* ಧಾರ್ಮಿಕ, ಜನಾಂಗೀಯ, ಭಾಷಿಕ, ಪ್ರಾದೇಶಿಕ, ಕೋಮು ಭಾವನೆ ಮತ್ತು ದ್ವೇಷಕ್ಕೆ ಕಾರಣವಾಗುವ ಸಂಘ ಸಂಸ್ಥೆಗಳಲ್ಲಿ ಭಾಗವಹಿಸುವಂತಿಲ್ಲ.

*ದೇಶದ ಸಾರ್ವಭೌಮತ್ವ, ಅಖಂಡತೆ, ಭದ್ರತೆ, ವಿದೇಶಿ ರಾಷ್ಟ್ರಗಳ ಸಂಬಂಧ ಹದಗೆಡಿಸುವ ಉದ್ದೇಶದ ಪ್ರತಿಭಟನೆ, ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸುವಂತಿಲ್ಲ.

* ಸರ್ಕಾರದಿಂದ ನೇಮಿಸಲ್ಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೇ ವೃತ್ತ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಭಾಗಶಃ ಅಥವಾ ಪೂರ್ಣ ಪ್ರಮಾಣದ ಒಡೆತನ ಹೊಂದುವಂತಿಲ್ಲ. ಸಂಪಾದನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಪೂರ್ವಾನುಮತಿ ಇಲ್ಲದೇ ಪತ್ರಿಕೆಗಳಿಗೆ ಲೇಖನ ಬರೆಯುವಂತಿಲ್ಲ.

* ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ.

*ವರದಕ್ಷಿಣೆ/ ವಧು ದಕ್ಷಿಣೆ ತೆಗೆದುಕೊಳ್ಳುವಂತಿಲ್ಲ. ವರದಕ್ಷಿಣೆಗಾಗಿ ವಧುವಿನ ತಂದೆ ತಾಯಿಗೆ ಬೇಡಿಕೆ ಸಲ್ಲಿಸುವಂತಿಲ್ಲ.

* ಪೂರ್ವಾನುಮತಿ ಇಲ್ಲದೆ ನೌಕರರು ಬಿನ್ನವತ್ತಳೆ, ಪ್ರಶಸ್ತಿ ಪತ್ರ ಸ್ವೀಕರಿಸುವಂತಿಲ್ಲ

* ತಂದೆ–ತಾಯಿಯನ್ನು ನಿರ್ಲಕ್ಷಿಸುವಂತಿಲ್ಲ. ಗೃಹ ಕೃತ್ಯಕ್ಕೆ ಮಕ್ಕಳನ್ನು ನೇಮಿಸಿಕೊಳ್ಳುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT