ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲ್ಲಾಳಿಗಳ ಹೊರಗಟ್ಟಲು ಆಡಳಿತ ಹಳ್ಳಿ ಕಡೆ: ಕಂದಾಯ ಸಚಿವ ಆರ್‌. ಅಶೋಕ

Last Updated 20 ಫೆಬ್ರುವರಿ 2021, 19:47 IST
ಅಕ್ಷರ ಗಾತ್ರ

ಜಿ. ಹೊಸಹಳ್ಳಿ (ದೊಡ್ಡಬಳ್ಳಾಪುರ): ಕಂದಾಯ ಇಲಾಖೆಯ ಕಚೇರಿಗಳಲ್ಲಿ ದಲ್ಲಾಳಿಗಳನ್ನು ಹೊರಗಟ್ಟಿ, ಆಡಳಿತ ವ್ಯವಸ್ಥೆಯನ್ನೇ ಹಳ್ಳಿಗಳಿಗೆ ಕೊಂಡೊಯ್ದು ಸಾಮಾನ್ಯ ಜನರಿಗೆ ನೇರವಾಗಿ ಸರ್ಕಾರದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಜಿ. ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಆರಂಭಿಸಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಸಾಶನ ಮಂಜೂರಾತಿ, ಪಹಣಿ, ಮ್ಯುಟೇಷನ್‌ ದಾಖಲೆ ಪಡೆಯಲು, ಪಡಿತರ ಚೀಟಿಗಾಗಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇನ್ನೂ ಇದೆ. ತಾಲ್ಲೂಕು ಕಚೇರಿಗಳಿಗೆ ಹೋದರೆ ಹತ್ತಿಪ್ಪತ್ತು ಮಂದಿ ದಲ್ಲಾಳಿಗಳು ಕಣ್ಣಿಗೆ ಬೀಳುತ್ತಾರೆ. ಅವರನ್ನು ಹೊರಗಟ್ಟಿ, ಜನರಿಗೆ ನೇರವಾಗಿ ಸೇವೆ ನೀಡುವುದೇ ನನ್ನ ಗುರಿ’ ಎಂದರು.

ಮೊದಲ ದಿನವೇ ರಾಜ್ಯದಾದ್ಯಂತ ಎಲ್ಲ ತಾಲ್ಲೂಕುಗಳಲ್ಲೂ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ಗಳು ಕಂದಾಯ ಇಲಾಖೆಯನ್ನು ಹಳ್ಳಿಗಳಿಗೆ ಕೊಂಡೊಯ್ದು, ಜನರ ಅಹವಾಲು ಆಲಿಸುತ್ತಿದ್ದಾರೆ. ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯಲಿದೆ. ಆಯಾ ಗ್ರಾಮಗಳಲ್ಲಿ ಬಾಕಿ ಇರುವ ಸಮಸ್ಯೆಗಳ ತುರ್ತು ಪರಿಹಾರಕ್ಕೆ ಸಂಪೂರ್ಣ ಪ್ರಯತ್ನ ನಡೆಯಲಿದೆ ಎಂದು ಹೇಳಿದರು.

ಒಂದು ತಿಂಗಳ ಮುಂಚಿತವಾಗಿಯೇ ಗ್ರಾಮ ವಾಸ್ತವ್ಯದ ಹಳ್ಳಿಗಳನ್ನು ಗುರುತಿಸಲಾಗುವುದು. ಪಹಣಿ, ಮ್ಯುಟೇಷನ್‌ ಸಮಸ್ಯೆಗಳ ಇತ್ಯರ್ಥ, ಪಡಿತರ ಚೀಟಿ ಮಂಜೂರಾತಿ, ಸ್ಮಶಾನ, ವಸತಿ ನಿವೇಶನಗಳಿಗೆ ಅಗತ್ಯ ಜಮೀನು ಮಂಜೂರು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಕರೆತರುವುದು, ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿರುವ ಜಮೀನು ಗುರುತಿಸಿ, ಮಂಜೂರು ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುವುದು ಎಂದರು.

ಆಡಳಿತ ವ್ಯವಸ್ಥೆಯನ್ನು ಹಳ್ಳಿಗಳಿಗೆ ಕೊಂಡೊಯ್ಯುವ ಕೆಲಸವನ್ನು ಎಲ್ಲ ಜಿಲ್ಲಾಧಿಕಾರಿಗಳೂ ಉತ್ಸುಕತೆಯಿಂದ ಆರಂಭಿಸಿದ್ದಾರೆ. ಮಹಿಳಾ ಅಧಿಕಾರಿಗಳೂ ರಾತ್ರಿ ಗ್ರಾಮದಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜಕೀಯವಿಲ್ಲ. ಬಡವರಿಗೆ, ಸಾಮಾನ್ಯ ಜನರಿಗೆ ಸರ್ಕಾರದ ಸೇವೆಗಳನ್ನು ತ್ವರಿತವಾಗಿ ತಲುಪಿಸುವುದೊಂದೇ ಗುರಿ ಎಂದು ಸಚಿವರು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ ವಾಸ್ತವ್ಯ
‘ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಮುಂದಿನ ತಿಂಗಳು ಕಲ್ಯಾಣ ಕರ್ನಾಟಕದ ಗ್ರಾಮವೊಂದರಲ್ಲಿ ವಾಸ್ತವ್ಯ ಮಾಡಿ, ಅಹವಾಲು ಆಲಿಸುವೆ’ ಎಂದು ಸಚಿವ ಅಶೋಕ ತಿಳಿಸಿದರು.

ಮಲೆನಾಡು, ಕರಾವಳಿ, ಹಳೆ ಮೈಸೂರು ಪ್ರದೇಶ ಸೇರಿದಂತೆ ಎಲ್ಲ ಭಾಗಗಳಿಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಡಿ ಭೇಟಿ ನೀಡಲಾಗುವುದು. ದೀರ್ಘ ಕಾಲದಿಂದ ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT