ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಆರಂಭ: ಪ್ರವಾಹ ಪೀಡಿತ, ಭೂಕುಸಿತ ಪ್ರದೇಶಗಳ ಮೇಲೆ ನಿಗಾ

ಡಿಯೋ ಸಂವಾದದ ಮೂಲಕ ಸಭೆ
Last Updated 7 ಜೂನ್ 2021, 10:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭವಾಗಿರುವ ಕಾರಣ ಪ್ರವಾಹ ಮತ್ತು ಭೂಕುಸಿತದಿಂದ ಜನರು ಬಾಧಿತರಾಗದಂತೆ ಮುನ್ನೆಚ್ಚರಿಕೆ ವಹಿಸಲು ನದಿ ಪಾತ್ರಗಳ 912 ಹಳ್ಳಿಗಳು, ಕೊಡಗು–ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಕು ಬಿಟ್ಟಿರುವ ಬೆಟ್ಟಗಳ ಸುತ್ತಮುತ್ತಲಿನ ಗ್ರಾಮಗಳನ್ನು ಗುರುತಿಸಲಾಗಿದೆ.

ವಿವಿಧ ಜಿಲ್ಲಾಧಿಕಾರಿಗಳ ಜತೆ ಕಂದಾಯ ಸಚಿವ ಆರ್‌.ಅಶೋಕ ಅವರು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಪ್ರದೇಶಗಳಲ್ಲಿ ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಪ್ರವಾಹ ಉಂಟಾಗಬಹುದು ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ವಿಶೇಷ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅಣೆಕಟ್ಟುಗಳು ತುಂಬಿದರೆ ನಮ್ಮ ರಾಜ್ಯದಲ್ಲಿ ಪ್ರವಾಹ ಆಗುತ್ತದೆ. ಆದ ಕಾರಣ ಪ್ರತಿ ದಿನವೂ ಆ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಅಲ್ಲಿ ಅಣೆಕಟ್ಟು ತುಂಬುವ ಸೂಚನೆ ಸಿಗುತ್ತಿದ್ದಂತೆ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಬೇಕು. ಪ್ರತಿ ಗಂಟೆಗೊಮ್ಮೆ ನೆರೆಯ ರಾಜ್ಯದ ಅಣೆಕಟ್ಟುಗಳ ಮಾಹಿತಿ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಲ್ಲೆಲ್ಲೆ ಭೂಕುಸಿತ ಸಂಭವಿಸಬಹುದು ಮತ್ತು ಎಲ್ಲಿ ಬೆಟ್ಟಗಳು ಬಿರುಕು ಬಿಟ್ಟಿವೆ. ಅವು ದೊಡ್ಡದಾಗುತ್ತಿವೆಯೇ ಎಂಬ ಬಗ್ಗೆ ಭಾರತೀಯ ಭೂಗರ್ಭ ವಿಜ್ಞಾನ ಇಲಾಖೆ ವರದಿ ನೀಡಿದೆ. ಅದರ ಅನ್ವಯ ಸುತ್ತಮುತ್ತ ಮನೆಗಳು ಇದ್ದರೆ ಜನರನ್ನು ತೆರವುಗೊಳಿಸಲಾಗುತ್ತದೆ. ಬೆಟ್ಟಗಳು ಬಿರುಕು ಬಿಟ್ಟಿರುವ ಪ್ರದೇಶಗಳಿಗೆ 3– 4 ದಿನ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿಯೂ ಹೇಳಿದರು.

ಸಾಂತ್ವನ ಕೇಂದ್ರಗಳನ್ನು ಈಗಲೇ ಆರಂಭಿಸಲು ಸೂಚನೆ ನೀಡಲಾಗಿದೆ. ಉತ್ತಮ ಗುಣಮಟ್ಟದ ಊಟ, ಉಪಾಹಾರ, ಹೊದಿಕೆ , ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಭೂಕುಸಿತ ಮತ್ತು ಸಂಪಕರ್ ಮಾರ್ಗ ಕಡಿದು ಹೋದರೆ ಅವುಗಳನ್ನು ತೆರವು ಮಾಡಲು ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ತಂಡವನ್ನು ಸಿದ್ಧವಾಗಿಡಲು ಸೂಚಿಸಲಾಗಿದೆ. ಆ ತಂಡದಲ್ಲಿ ತೆರುವು ಕಾರ್ಯಕ್ಕೆ ಅಗತ್ಯವಾದ ಟಾರ್ಚ್‌ನಿಂದ ಹಿಡಿದು ಎಲ್ಲ ಸಾಮಗ್ರಿಗಳನ್ನೂ ಹೊಂದಿರಬೇಕು ಎಂದು ಹೇಳಿದರು.

ಅಲ್ಲದೆ, ಈ ಪ್ರದೇಶಗಳಲ್ಲಿ ಮೂರು– ನಾಲ್ಕು ತಿಂಗಳ ಮಟ್ಟಿಗೆ ವೈದ್ಯರು ಮತ್ತು ಶುಶ್ರೂಶಕರನ್ನು ಒಳಗೊಂಡ ತಂಡವನ್ನು ಇಡಲಾಗುವುದು. ಅವಘಡ ಸಂಭವಿಸಿದರೆ, ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗುವುದು ಎಂದರು.

ಪ್ರವಾಹದ ಸಂದರ್ಭದಲ್ಲಿ ತಗ್ಗಿನ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಬ್ಯಾರೇಜ್‌ಗಳ ಮೇಲೆ ನೀರು ಹರಿಯುವಾಗ ಕೆಲವರು ಮೋಜಿಗಾಗಿ ವಾಹನಗಳನ್ನು ಒಯ್ಯುವುದನ್ನು ತಡೆಯಲ್ಲಿ ಸಂಚಾರ ನಿರ್ಬಂಧ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಪ್ರವಾಹ ಮತ್ತು ಭೂಕುಸಿತ ಸಂಭವಿಸಿದರೆ, ನಿಭಾಯಿಸಲು ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹643.81 ಕೋಟಿ ಹಣ ಇದೆ. ಕೇಂದ್ರದಿಂದ ₹ 1054 ಕೋಟಿ ಮಂಜೂರಾಗಿದ್ದು, ಅದರಲ್ಲಿ ₹316 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ರಾಜ್ಯದ ಪಾಲೂ ಇದೆ. ಅಲ್ಲದೆ, ತುರ್ತು ಸ್ಥಿತಿ ನಿಭಾಯಿಸಲು 400 ಜನರ ಎಸ್‌ಡಿಆರ್‌ ಮತ್ತು 4 ಎನ್‌ಡಿಆರ್ ತಂಡಗಳಿವೆ. ಪ್ರತಿವಾರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಿಸ್ಥಿತಿ ಅವಲೋಕನ ಸಭೆಯೂ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT