ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೆಟ್ರೊ ಸುರಂಗ ಕೊರೆಯುವಾಗ ಕುಸಿದ ರಸ್ತೆ, ಬೈಕ್‌ ಸವಾರನಿಗೆ ಗಾಯ

Last Updated 12 ಜನವರಿ 2023, 18:57 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಕುಸಿದು ತಾಯಿ–ಮಗು ಮೃತಪಟ್ಟ ಬೆನ್ನಲ್ಲೇ ಬ್ರಿಗೇಡ್ ರಸ್ತೆಯಲ್ಲಿ ಮೆಟ್ರೊ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ದಿಢೀರ್ ರಸ್ತೆ ಕುಸಿದಿದೆ. ಗುಂಡಿಯಲ್ಲಿ ಬೈಕ್‌ ಬಿದ್ದು, ಸವಾರ ಪುನೀತ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರ ತನಕ 13 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಎಂ.ಜಿ.ರಸ್ತೆಯಿಂದ ವೆಲ್ಲಾರ ಜಂಕ್ಷನ್‌ ತನಕ ಸುರಂಗ ಮಾರ್ಗವನ್ನು ಟಿಬಿಎಂ(ಟನಲ್ ಬೋರಿಂಗ್ ಮಷಿನ್‌) ಕೊರೆಯುತ್ತಿದೆ.

ಶೂಲೆ ಸಿಗ್ನಲ್‌ ಬಳಿಯ ಬ್ರಿಗೇಡ್ ಟವರ್ ಎದುರು ಗುರುವಾರ ದಿಢೀರ್ ಸಿಂಕ್‌ ಹೋಲ್ ಕಾಣಿಸಿಕೊಂಡಿದೆ. ಮೊದಲಿಗೆ ಸಣ್ಣ ಗುಂಡಿಯಂತೆ ಕಂಡಿದ್ದು, ಅದನ್ನು ಗಮನಿಸದೆ ಅದರ ಮೇಲೆಯೇ ಬೈಕ್ ಚಾಲನೆ ಮಾಡಿದ ಬೈಕ್ ಸವಾರ ರಸ್ತೆಯಲ್ಲೇ ಬಿದ್ದರು.

ಅತಿ ಹೆಚ್ಚು ದಟ್ಟಣೆ ಇರುವ ಈ ರಸ್ತೆಯಲ್ಲಿ ಬೈಕ್ ಸವಾರ ಬಿದ್ದ ಸಂದರ್ಭದಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಸ್ಥಳೀಯರು ಕೂಡಲೇ ಅವರನ್ನು ಮೇಲೆತ್ತಿದರು. ಈ ಘಟನೆ ಸಂಭವಿಸಿ 5ರಿಂದ 10 ನಿಮಿಷದಲ್ಲೇ ಮೂರು ಮೀಟರ್‌ನಷ್ಟು ಗುಂಡಿ ದೊಡ್ದದಾಯಿತು. ಶೂಲೆ ವೃತ್ತದ ಬಳಿ ಮೆಟ್ರೊ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದನ್ನು ನೋಡಿಕೊಳ್ಳುತ್ತಿದ್ದ ಎಂಜಿನಿಯರ್‌ಗಳು ಸ್ಥಳಕ್ಕೆ ಬಂದು ಬ್ಯಾರಿಕೇಡ್ ಹಾಕಿಸಿದರು. ಪೊಲೀಸರ ನೆರವು ಪಡೆದು ವಾಹನ ಸಂಚಾರವನ್ನು ಈ ರಸ್ತೆಯಲ್ಲಿ ಬಂದ್ ಮಾಡಿ, ರಿಚ್‌ಮಂಡ್ ವೃತ್ತದ ಕಡೆಗೆ ತಿರುಗಿಸಲಾಯಿತು.

ಕೂಡಲೇ ಗುಂಡಿ ಮುಚ್ಚುವ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಆರಂಭಿಸಿತು. ಕುಸಿದಿದ್ದ ಗುಂಡಿಯಲ್ಲಿದ್ದ ನೀರು ಹೊರಹಾಕಿ ಕಾಂಕ್ರಿಟ್‌ ಹಾಕಿ ಮುಚ್ಚಲಾಯಿತು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೇರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ನೀರಿನ ಪೈಪ್‌ಲೈನ್ ಸೋರಿಕೆಯಿಂದ ಈ ಕುಸಿತ ಉಂಟಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ಬಂಬೂ ಬಜಾರ್‌ ಬಳಿ ಸುರಂಗ ಮಾರ್ಗ ಕುಸಿದಿತ್ತು. 2021ರ ಅಕ್ಟೋಬರ್‌ನಲ್ಲಿ ಟ್ಯಾನರಿ ರಸ್ತೆಯ ಒಂದು ಭಾಗದಲ್ಲಿ ಕುಸಿದಿತ್ತು. 2021ರ ಡಿಸೆಂಬರ್‌ನಲ್ಲಿ ಪೈಪ್‌ಲೈನ್ ಸೋರಿಕೆಯಿಂದ ಜೆ.ಸಿ. ರಸ್ತೆಯಲ್ಲಿ ಸಿಂಕ್‌ಹೋಲ್ ಕಾಣಿಸಿಕೊಂಡಿತ್ತು.

ಸುರಂಗ ಕಾಮಗಾರಿ ಕಾರಣವಲ್ಲ: ಅಂಜುಂ ಪರ್ವೇಜ್
ಈ ಜಾಗದಲ್ಲಿ ಸುರಂಗ ಕೊರೆದು ಐದು ದಿನಗಳ ಬಳಿಕ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಈ ಗುಂಡಿ ಬೀಳಲು ಟಿಬಿಎಂ ಕಾರಣವಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಪ್ರತಿಕ್ರಿಯಿಸಿದರು.

ನೆಲ ಮಟ್ಟದಿಂದ 10.5 ಮೀಟರ್ ಆಳದಲ್ಲಿ ಸುರಂಗ ಇದ್ದು, ಸುತ್ತಲೂ ದೊಡ್ಡ ಬಂಡೆಗಳಿವೆ. ಬಂಡೆಗಳನ್ನು ಸೀಳಿ ಸುರಂಗ ಕೊರೆಯಲಾಗಿದ್ದು, ಈ ಜಾಗದಲ್ಲಿ ಭೂಮಿ ಕುಸಿಯಲು ಸಾಧ್ಯವಿಲ್ಲ ಎಂದರು.

‘ಕುಸಿದಿರುವ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಸುರಂಗ ಕೊರೆಯುವಾಗ ಯಾವುದೇ ನೀರಿನ ಸೋರಿಕೆ ಕಂಡುಬಂದಿಲ್ಲ. ಇದೆಲ್ಲವನ್ನೂ ನೋಡಿದರೆ ಮೆಟ್ರೊ ಸುರಂಗ ಕಾಮಗಾರಿಗೂ, ಈ ಕುಸಿತಕ್ಕೂ ಸಂಬಂಧ ಇದ್ದಂತಿಲ್ಲ’ ಎಂದು ಹೇಳಿದರು.

ಹಳೇ ಬಾವಿ, ಜಲಮಂಡಳಿ ಕೊಳವೆಬಾವಿಗಳು ಇದ್ದರೆ ಸುರಂಗ ಕೊರೆಯುವಾಗಿನ ಕಂಪನದಿಂದ ಮಣ್ಣು ಸಡಿಲಗೊಂಡಿದ್ದರೆ, ಅದರಿಂದ ಕುಸಿತ ಆಗಿರುವ ಸಾಧ್ಯತೆ ಇದೆ ಎಂದು ಎಂಜಿನಿಯರ್‌ಗಳು ಹೇಳುತ್ತಾರೆ.

ಇಂದು ಮಧ್ಯಾಹ್ನದ ಬಳಿಕ ವಾಹನ ಸಂಚಾರ
ಹೊಸೂರು ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಯಿಂದ ಎಂ.ಜಿ.ರಸ್ತೆ ಮತ್ತು ಶಿವಾಜಿನಗರಕ್ಕೆ ಸಂಪರ್ಕಿಸುವ ‍ಪ್ರಮುಖ ರಸ್ತೆ ಇದಾಗಿದ್ದು, ಶುಕ್ರವಾರ ಮಧ್ಯಾಹ್ನದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಸದ್ಯ 20 ಟನ್ ಕಾಂಕ್ರಿಟ್ ಹಾಕಿ ಗುಂಡಿ ಮುಚ್ಚಲಾಗಿದೆ. ವಾಹನ ಸಂಚಾರಕ್ಕೆ ಸುರಕ್ಷವಾಗಿದೆಯೇ ಎಂಬುದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲಾದರೂ ಸಡಿಲ ಮಣ್ಣು ಕಾಣಿಸಿದರೆ ಮತ್ತೆ ಕಾಂಕ್ರಿಟ್ ಹಾಕಲಾಗುತ್ತದೆ‘ ಎಂದರು.

ಜಲಮಂಡಳಿ ಪೈಪ್‌ಲೈನ್ ಇಲ್ಲ
ಸ್ಥಳಕ್ಕೆ ಜಲಮಂಡಳಿ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆ ಜಾಗದಲ್ಲಿ ಯಾವುದೇ ಪೈಪ್‌ಲೈನ್ ಇಲ್ಲ ಎಂದು ಅವರು ಖಾತರಿಪಡಿಸಿದ್ದಾರೆ.

’ಸ್ಥಳದಿಂದ 100 ಮೀಟರ್ ದೂರದಲ್ಲಿ ಪೈಪ್‌ಲೈನ್‌ಗಳಿವೆ. ಟೆಂಡರ್ ಶ್ಯೂರ್ ಯೋಜನೆಯಡಿ ಅವುಗಳನ್ನು ನಾಲ್ಕು ವರ್ಷಗಳ ಹಿಂದಷ್ಟೇ ಬದಲಿಸಲಾಗಿದೆ. ಆದ್ದರಿಂದ ನೀರು ಸೋರಿಕೆಯಾಗುವ ಸಾಧ್ಯತೆ ಇಲ್ಲ. ಈ ವಿಷಯವನ್ನು ಬಿಎಂಆರ್‌ಸಿಎಲ್‌ಗೆ ತಿಳಿಸಿದ್ದೇವೆ’ ಎಂದು ಎಂಜಿನಿಯರ್‌ ಒಬ್ಬರು ತಿಳಿಸಿದರು.

ಪೈಪ್‌ಲೈನ್‌ ಸೋರಿಕೆ ಕಾರಣ?
ಸದ್ಯ ಗುಂಡಿ ಮುಚ್ಚಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ಕುಸಿಯಲು ಕಾರಣ ಏನು, ಮುಚ್ಚಿರುವ ಗುಂಡಿ ಸುರಕ್ಷವೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪೈಪ್‌ಲೈನ್ ಸೋರಿಕೆಯಿಂದ ಈ ಕುಸಿತ ಉಂಟಾಗಿರಬಹುದು. ಮೆಟ್ರೊ ಕಾಮಗಾರಿಯಾಗಿದ್ದರೆ ನೀರು ತುಂಬಿಕೊಳ್ಳಲು ಕಾರಣ ಏನು, ಎಲ್ಲಾದರೂ ಪೈಪ್‌ಲೈನ್ ಇದೆಯೇ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಉಕ್ಕಿನ ಕೋನವೊಂದನ್ನು ಸುರಂಗದೊಳಕ್ಕೆ ಕಳುಹಿಸಲಾಗಿದೆ. ಸುರಂಗದೊಳಗೆ ಮಣ್ಣು ಕುಸಿದಿದ್ದರೆ ಆ ಕೋನ ಅಲ್ಲಿ ಸಿಕ್ಕಿಕೊಳ್ಳಲಿದೆ. ಇಲ್ಲದಿದ್ದರೆ ನಿಧಾನವಾಗಿ ಮುಂದೆ ಸಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ರಸ್ತೆ ನಿರ್ವಹಣೆ ಕೊರತೆಯೂ ಕಾರಣ’
ನೀರಿನ ಸೋರಿಕೆ, ರಸ್ತೆಯ ನಿರ್ವಹಣೆಯಲ್ಲಿ ವಿಫಲ್ಯವಾದರೆ, ಕಳಪೆ ಡಾಂಬರ್‌ ಬಳಕೆಯಾಗಿದ್ದರೆ ಈ ರೀತಿಯ ಕುಸಿತ ಸಂಭವಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

‘ಮಣ್ಣಿನ ಗುಣಮಟ್ಟ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ನೀರಿನ ಸೋರಿಕೆ ಮಣ್ಣನ್ನು ಸಡಿಲಗೊಳಿಸುತ್ತದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ.ಪಿ. ಅನ್ಬಳಗನ್ ಹೇಳಿದರು.

‘ಮೂರು ಇಂಚು ದಪ್ಪದ ಡಾಂಬರ್ ಹಾಕಬೇಕುತ್ತದೆ. ನಗರದ ಕೆಲವು ರಸ್ತೆಗಳಲ್ಲಿ ಈ ನಿಯಮ ಪಾಲನೆ ಆಗಿರುವುದಿಲ್ಲ. ಇದು ಕೂಡ ಕೆಲವೊಮ್ಮೆ ಕುಸಿತಕ್ಕೆ ಕಾರಣವಾಗುತ್ತದೆ’ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಚನ್ನಾಳ್ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT