ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಟಿಐ ಪರಿಕರ ವಾಪಸ್‌ ನೀಡಿ’: ರೋಹಿಣಿ ಸಿಂಧೂರಿಗೆ ಪತ್ರ ಬರೆದ ಎಟಿಐ

ಆಡಳಿತ ತರಬೇತಿ ಸಂಸ್ಥೆ ಅತಿಥಿಗೃಹದಿಂದ ಡಿ.ಸಿ ನಿವಾಸಕ್ಕೆ 20 ವಸ್ತುಗಳು
Last Updated 5 ಡಿಸೆಂಬರ್ 2022, 21:47 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಅತಿಥಿಗೃಹದಲ್ಲಿ 2020ರಲ್ಲಿ ವಾಸ್ತವ್ಯ ಹೂಡಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ಅಲ್ಲಿನ 20 ವಸ್ತುಗಳನ್ನು ಜಿಲ್ಲಾಧಿಕಾರಿ ನಿವಾಸಕ್ಕೆ ಒಯ್ದಿದ್ದು, ಅವುಗಳನ್ನು ಮರಳಿಸುವಂತೆ ಸಂಸ್ಥೆಯು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿದೆ.

ಸಂಸ್ಥೆಯ ಜಂಟಿ ನಿರ್ದೇಶಕರ ಕಚೇರಿಯಿಂದ ನ.30ರಂದು ಪತ್ರ ಬರೆಯಲಾಗಿದೆ. ಹೀಗೆ ಪತ್ರ ಬರೆಯುತ್ತಿರುವುದು ಇದು 4ನೇ ಬಾರಿ. 2020ರ ಡಿ.16, 2021ರ ಜ.8 ಹಾಗೂ ಏ.21ರಲ್ಲೂ ಸಂಸ್ಥೆ ಪತ್ರ ಬರೆದಿತ್ತು ಎಂದು ತಿಳಿದುಬಂದಿದೆ.

‘2020ರ ಅ.2ರಿಂದ 2020ರನ.14ರವರೆಗೆ ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಜಿಲ್ಲಾಧಿಕಾರಿ ನಿವಾಸಕ್ಕೆ ಸ್ಥಳಾಂತರ ವೇಳೆ ಅತಿಥಿಗೃಹದ 2 ಟೆಲಿಫೋನ್‌ ಟೇಬಲ್‌, 2 ಬಟ್ಟೆ ಹ್ಯಾಂಗರ್, 2 ಬೆತ್ತದ ಕುರ್ಚಿ, 2 ಟೆಲಿಫೋನ್‌ ಸ್ಟೂಲ್‌, 2 ಟೀಪಾಯಿ, ಒಂದು ಮೈಕ್ರೋವೇವ್ ಒವನ್‌, ಮಂಚ, ಹಾಸಿಗೆ, 2 ಪ್ಲಾಸ್ಟಿಕ್‌ ಕುರ್ಚಿ, 2 ಯೋಗಾ ಮ್ಯಾಟ್‌, 2 ಸ್ಟೀಲ್‌ ಜಗ್‌ ಕೊಂಡೊಯ್ದಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರೋಹಿಣಿ ಜಿಲ್ಲಾಧಿಕಾರಿ ಆಗಿದ್ದ ವೇಳೆ ಪತ್ರ ಬರೆದಿದ್ದರೂ, ಪ್ರತಿಕ್ರಿಯೆ ಬಂದಿಲ್ಲ. ಈಗ ಮತ್ತೊಮ್ಮೆ ಕೋರಲಾಗಿದೆ.

‘ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರೆ ಅವರು ಉತ್ತರ ಕೊಡುತ್ತಾರೆ. ನಾನು ಇದ್ದಾಗ ಯಾವ ಪತ್ರವನ್ನೂ ಬರೆದಿರಲಿಲ್ಲ. ಈ ವಿಷಯವನ್ನು ಇದೇ ಮೊದಲಿಗೆ ಕೇಳುತ್ತಿದ್ದೇನೆ’ ಎಂದು ರೋಹಿಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ವಿಷಯ ಸೋಮವಾರ ಗಮನಕ್ಕೆ ಬಂದಿದ್ದು, ಪೂರ್ಣ ಮಾಹಿತಿ ಪಡೆದು ಪರಿಶೀಲಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT