ಶನಿವಾರ, ಅಕ್ಟೋಬರ್ 24, 2020
28 °C

ಆರ್‌.ಆರ್‌. ನಗರ: ಡಿಕೆಶಿಯಿಂದ ‘ಆಪರೇಷನ್‌ ಹಸ್ತ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದ ಬೆಟ್ಟಸ್ವಾಮಿಗೌಡ ಸೇರಿದಂತೆ, ಜೆಡಿಎಸ್‌ ಮತ್ತು ಇತರ ಪಕ್ಷಗಳ  ಪದಾಧಿಕಾರಿಗಳನ್ನು ‘ಆಪರೇಷನ್‌ ಹಸ್ತ’ ದ ಮೂಲಕ ಪಕ್ಷಕ್ಕೆ ಬಲ ತುಂಬುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಪಕ್ಷದ ವಾರ್ಡ್ ಅಧ್ಯಕ್ಷೆ ಸುನಂದಾ ಶ್ರೀನಿವಾಸ್, ಅಂಥೋಣಿ, ಕೋದಂಡರಾಮಯ್ಯ, ರಾಜೇಶ್, ಶಿವಮುನಿಗೌಡ ಸೇರಿ 240ಕ್ಕೂ ಹೆಚ್ಚು ಮಂದಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಸೇರಿದ್ದಾರೆ.

ಎಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಇವರೆಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು 15 ವರ್ಷಗಳಿಂದ ನಾವು ಪ್ರಯತ್ನಿಸಿದ್ದೆವು. ಆದರೆ, ಸಮಯ ಕೂಡಿ ಬಂದಿರಲಿಲ್ಲ. ಈಗ ಯಾವ ಷರತ್ತೂ ಇಲ್ಲದೆ ಎಲ್ಲರೂ ಪಕ್ಷಕ್ಕೆ ಬಂದಿದ್ದಾರೆ. ನಮಗೆ ಮತ್ತಷ್ಟು ಬಲ ಬಂದಿದೆ’ ಎಂದರು.

‘ಆರ್.ಆರ್. ನಗರ ಕ್ಷೇತ್ರ ನಮಗೆ ಹತ್ತಿರದ ಕ್ಷೇತ್ರ. ಇಲ್ಲಿ ಎಂ.ಶ್ರೀನಿವಾಸ್ ಜೆಡಿಎಸ್ ಶಾಸಕರಾಗಿದ್ದರು. ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದರು. ಹಾಲಿ ಗೆದ್ದವರು ಪಕ್ಷ ತ್ಯಜಿಸಿದ್ದಾರೆ. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಗೆಲ್ಲಿಸಬೇಕಿದೆ. ಪಕ್ಷಕ್ಕೆ ಬಂದವರಿಗೆ ದೊಡ್ಡಪಡೆ ಕಟ್ಟುವ ಶಕ್ತಿಯಿದೆ’ ಎಂದರು.

‘ಆರ್.ಆರ್. ನಗರದಲ್ಲಿ ಜೆಡಿಎಸ್ ಸಮಾಧಿ ಆಗಲಿದೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ನಾವು ಯಾರ ಸಮಾಧಿಯನ್ನೂ ಮಾಡುವುದಿಲ್ಲ. ಅವರ ಪಕ್ಷ ಅವರದ್ದು, ನಮ್ಮ ಪಕ್ಷ ನಮ್ಮದು’ ಎಂದರು.

ಅದಕ್ಕೂ ಮೊದಲು ಅವರು, ನಾಗರಬಾವಿಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಮತ್ತು ಚಿತ್ರನಟ ‘ನೆನಪಿರಲಿ’ ಪ್ರೇಮ್‌ ಅವರನ್ನು ನಿವಾಸಗಳಿಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು