ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ₹100 ಕೋಟಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿಪತ್ತು ನಿಧಿ ಅಡಿ 12 ರಾಜ್ಯಗಳಿಗೆ 5 ವರ್ಷಗಳಿಗೆ ₹1,200 ಕೋಟಿ ನಿಗದಿ
Last Updated 15 ಫೆಬ್ರುವರಿ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಬರ ಕುರಿತು ಸಮಗ್ರ ಅಧ್ಯಯನ ಮತ್ತು ಅದರ ಉಪಶಮನಕ್ಕಾಗಿ ಕಾರ್ಯತಂತ್ರ ರೂಪಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿಪತ್ತು ನಿಧಿ ಅಡಿಯಲ್ಲಿ 12 ರಾಜ್ಯಗಳಿಗೆ ಐದು ವರ್ಷಗಳ ಅವಧಿಗೆ ₹1,200 ಕೋಟಿ ನಿಗದಿ ಮಾಡಿದ್ದು, ಕರ್ನಾಟಕಕ್ಕೆ ₹100 ಕೋಟಿ ಸಿಗಲಿದೆ.

ದೇಶದಲ್ಲಿ ಪದೇ ಪದೇ ಬರಗಾಲಕ್ಕೆ ತುತ್ತಾಗುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ಅತಿ ಹೆಚ್ಚು ಜಿಲ್ಲೆಗಳು ಬರಪೀಡಿತವಾಗುವ ಕಾರಣದಿಂದಾಗಿ ಈಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಕುಡಿಯುವ ನೀರು, ಕೃಷಿ ಪದ್ಧತಿ, ಜಾನುವಾರುಗಳ ಸಂರಕ್ಷಣೆ ಮತ್ತು ಉದ್ಯೋಗಾವಕಾಶಗಳು ಸೇರಿದಂತೆ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಬೇಕಾಗಿದೆ.

ಈ ಅಧ್ಯಯನಕ್ಕೆ ವರ್ಷಕ್ಕೆ ತಲಾ ₹20 ಕೋಟಿಯಂತೆ ಒಟ್ಟು ₹100 ಕೋಟಿ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬರ, ಪ್ರವಾಹ ಸೇರಿದಂತೆ ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಿದ ನಂತರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು ಇಲ್ಲಿಯವರೆಗೆ ನಡೆದುಕೊಂಡು ಬಂದಿದ್ದ ಪದ್ಧತಿ. ಇನ್ನು ಮುಂದೆ ವಿಕೋಪ ಸಂಭವಿಸುವುದಕ್ಕೂ ಮೊದಲೇ ಅದಕ್ಕಾಗಿ ಸಜ್ಜಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಇದರಲ್ಲಿ ಮುಖ್ಯವಾಗಿ ಸಿದ್ಧತೆ, ಸಿಬ್ಬಂದಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ತರಬೇತಿ ನೀಡಲಾಗುವುದು ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ನಷ್ಟ ಪರಿಹಾರ ಕೊಡುವಂತಿಲ್ಲ?
ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಮೂಲಕ ಬಿಡುಗಡೆ ಮಾಡುವ ಹಣದಲ್ಲಿ ಸಂತ್ರಸ್ತರಾದವರಿಗೆ ನೇರವಾಗಿ ಪರಿಹಾರ ನಗದು ರೂಪದಲ್ಲಿ ಹಂಚುವುದಕ್ಕೆ ಸಾಧ್ಯವಿಲ್ಲ ಎಂಬ ಹೊಸ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿದೆ.

ವಿಪತ್ತು ಪರಿಹಾರ ನಿಧಿಯಡಿ ಬಿಡುಗಡೆ ಮಾಡುವ ಒಟ್ಟು ಹಣದಲ್ಲಿ ಶೇ 40ರಷ್ಟು ಮೊತ್ತ ರಕ್ಷಣೆ ಮತ್ತು ತುರ್ತು ಪರಿಹಾರ ಕಾಮಗಾರಿಗಳಿಗೆ, ಶೇ 30ರಷ್ಟು ಮೊತ್ತ ಪುನರ್‌ ನಿರ್ಮಾಣಕ್ಕೆ, ಶೇ 10ರಷ್ಟು ಸಾಮರ್ಥ್ಯಾಭಿವೃದ್ಧಿ ಮತ್ತು ಶೇ 20ರಷ್ಟು ಮೊತ್ತ ಉಪಶಮನಕ್ಕೆ ಬಳಸಲಾಗುವುದು ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಕ್ರಮದಿಂದಾಗಿ, ಪ್ರಾಕೃತಿಕ ದುರಂತ ನಿಭಾಯಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಡುಗಡೆ ಮಾಡುವ ಹಣ ಪರಿಹಾರದ ಹೆಸರಿನಲ್ಲಿ ಅನ್ಯರ ಪಾಲಾಗುವುದು ಇನ್ನು ಮುಂದೆ ಸಾಧ್ಯವಿಲ್ಲ. ಆದರೆ, ಮನೆಗಳು ಬಿದ್ದು ಹೋದರೆ ಅದಕ್ಕೆ ನೀಡುವ ಪರಿಹಾರದ ಮೊತ್ತ ಮತ್ತು ಬೆಳೆ ನಷ್ಟದ ಪರಿಹಾರದ ಮೊತ್ತ ಪ್ರಮಾಣ ಹೆಚ್ಚಾಗಲಿದೆ ಎಂದೂ ಅವರು ಹೇಳಿದರು.

ಬರ ಪ್ರದೇಶದ ಅಧ್ಯಯನದ ಮೊತ್ತವನ್ನು ಬಿಟ್ಟು ಎಸ್‌ಡಿಆರ್‌ಎಫ್‌ (ಸ್ಟೇಟ್‌ ಡಿಸಾಸ್ಟರ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಫಂಡ್‌) ಅಡಿ ರಾಜ್ಯಕ್ಕೆ ₹1,054 ಕೋಟಿ ಕಳೆದ ಮಾರ್ಚ್‌ನಲ್ಲಿ ಬಿಡುಗಡೆ ಆಗಿದೆ. ಹಿಂದೆ ರಾಜ್ಯಕ್ಕೆ ಈ ಬಾಬ್ತಿನಲ್ಲಿ ₹300 ಕೋಟಿ ನೀಡಲಾಗುತ್ತಿತ್ತು ಎಂದರು.

ಬಿಬಿಎಂಪಿಗೆ₹250 ಕೋಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಕೋಪಗಳ ತಡೆಗೆ ಉಪಶಮನ ನಿಧಿಯಾಗಿ ಎನ್‌ಡಿಆರ್‌ಎಫ್‌ ₹250 ಕೋಟಿ ನೀಡಿದೆ. ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಪ್ರವಾಹ ಮತ್ತು ಇತರ ದುರಂತಗಳ ತಡೆಯುವ ಕಾರ್ಯಗಳಿಗೆ ಇದನ್ನು ಬಳಸಬಹುದು. ವಿಶೇಷವಾಗಿ ಈ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT