ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ್‌ ಮಿಷನ್‌: ₹1,031 ಕೋಟಿ ಅನುದಾನ

Last Updated 10 ಫೆಬ್ರುವರಿ 2023, 4:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಜೀವನ್‌ ಮಿಷನ್‌ ಮತ್ತು ಬಹುಗ್ರಾಮ ಯೋಜನೆಯಡಿ 756 ಕ್ಕೂ ಹೆಚ್ಚು ಗ್ರಾಮಗಳು ಮತ್ತು ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಒಟ್ಟು ₹1,031 ಕೋಟಿ ಅನುದಾನ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಬಹುಗ್ರಾಮ ಯೋಜನೆಯಡಿ ₹26 ಕೋಟಿ ವೆಚ್ಚದಲ್ಲಿ 166 ಗ್ರಾಮಗಳು, ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ 15 ಗ್ರಾಮಗಳಲ್ಲಿ ₹28 ಕೋಟಿ ವೆಚ್ಚದಲ್ಲಿ ಜಲ್‌ಜೀವನ್‌ ಮಿಷನ್‌ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಹೊಸದುರ್ಗ ತಾಲ್ಲೂಕಿನ 366 ಗ್ರಾಮಗಳು, ತರೀಕೆರೆ ತಾಲ್ಲೂಕಿನ 117 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ₹350 ಕೋಟಿ, ಚಿಕ್ಕೋಡಿ ತಾಲ್ಲೂಕಿನ 12 ಗ್ರಾಮಗಳಿಗೆ ₹32 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸಲು ಅನುಮೋದನೆ ನೀಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಮತ್ತು ಹೊರಗೆ ಬರುವ 92 ಬಹು ಗ್ರಾಮಗಳು ಮತ್ತು ಜನ ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ₹595 ಕೋಟಿ ಅಂದಾಜಿನ ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಪ್ರಮುಖ ತೀರ್ಮಾನಗಳು

*ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಒಟ್ಟು ₹25 ಕೋಟಿ ಅನುದಾನಕ್ಕೆ ಒಪ್ಪಿಗೆ.

*ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಅಧಿಕ ರೆಸಲ್ಯೂಷನ್‌ನ ಉಪಗ್ರಹ ದತ್ತಾಂಶ ಖರೀದಿಗೆ ₹18 ಕೋಟಿ

*ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022–27 ಕ್ಕೆ ತಿದ್ದುಪಡಿಗೆ ಒಪ್ಪಿಗೆ. ಪವನ ವಿದ್ಯುತ್‌ ಕಂಪನಿಗಳು ಕಾರ್ಯಾರಂಭ ಮಾಡುವ ಅವಧಿಯನ್ನು 3 ವರ್ಷಗಳಿಂದ 2 ವರ್ಷಗಳ ಅವಧಿಗೆ ಇಳಿಕೆ.

*ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯ ಸಾಮರ್ಥ್ಯವನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಏರಿಸಲು ತೀರ್ಮಾನ.

*ಚಿಕ್ಕಬಳ್ಳಾಪುರ– ನೆಲಮಂಗಲ 54 ನೇ ಕಿ.ಮೀ ನಿಂದ 62 ನೇ ಕಿ.ಮೀ.ವರೆಗೆ ರಸ್ತೆ ಅಭಿವೃದ್ಧಿಗೆ ₹10.13 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ.

*ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಮೂಲಸೌಕರ್ಯದ ಅಭಿವೃದ್ಧಿಯ ಅಂಗವಾಗಿ ಹಾವೇರಿ ಜಿಲ್ಲೆ ಹಿರೇಕೆರೂರಿನ ಮಾಸೂರಿನಲ್ಲಿ ₹25 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರಸ್ತೆ, ತಡೆಗೋಡೆ, ಭವನ, ಪ್ರವೇಶ ಕಮಾನು ಇತ್ಯಾದಿಗಳ ನಿರ್ಮಾಣವಾಗಲಿದೆ.

*ಮುಖ್ಯಮಂತ್ರಿ ಅವರ ಸ್ವಕ್ಷೇತ್ರ ಶಿಗ್ಗಾವಿಯ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ₹73.75 ಕೋಟಿ. ಹಾವೇರಿ ಜಿಲ್ಲೆ ನೆಲಗೊಳ ಗ್ರಾಮದಲ್ಲಿ ಬಹು ಕೌಶಲ್ಯ ತರಬೇತಿ ಕೇಂದ್ರ ಬಾಲಕರ ವಿದ್ಯಾರ್ಥಿನಿಲಯ ಸ್ಥಾಪನೆಗೆ ₹35.55 ಕೋಟಿ.

*ಮಡಿಕೇರಿಯಲ್ಲಿ ಹೊಸದಾಗಿ ಎಸ್ಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹12 ಕೋಟಿ

*ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ಮತ್ತು ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ₹26 ಕೋಟಿ ನೀಡಲು ಒಪ್ಪಿಗೆ.

*ಕರ್ನಾಟಕ ಲೋಕಸೇವಾ ಆಯೋಗಕ್ಕೆ ಒಂದು ಸದಸ್ಯ ಹುದ್ದೆ ತುಂಬಲು ಮುಖ್ಯಮಂತ್ರಿಗೆ ಅಧಿಕಾರ.

*ನರಗುಂದದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಪಂಚಮಸಾಲಿ ಸಮುದಾಯಕ್ಕೆ 2 ಎಕರೆ ಭೂಮಿ ನೀಡಲು ತೀರ್ಮಾನ.

*ರಾಜ್ಯದ 30 ಐಟಿಐಗಳನ್ನು ಟಾಟಾ ಟೆಕ್ನಾಲಜಿ ಕಂಪನಿಯ ಸಹಯೋಗದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಪ್ರತಿ ಐಟಿಐಗೆ ತಲಾ ₹ 27.20 ಕೋಟಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT