ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಾಗದ ₹29,826 ಕೋಟಿ, ನಗದು ಶಿಲ್ಕು ಇದ್ದರೂ ₹48,499 ಕೋಟಿ ಸಾಲ: ಸಿಎಜಿ ವರದಿ

ಸಿಎಜಿ ವರದಿ: ನಗದು ಶಿಲ್ಕು ಇದ್ದರೂ ₹48,499 ಕೋಟಿ ಸಾಲ
Last Updated 15 ಸೆಪ್ಟೆಂಬರ್ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: 2019–20ರಲ್ಲಿ ಅವಾಸ್ತವಿಕ ಬಜೆಟ್‌ ರೂಪಿಸಿದ ಪರಿಣಾಮವಾಗಿ ₹29,826.44 ಕೋಟಿ ಅನುದಾನ ಬಳಕೆಯಾಗದೆ ವರ್ಷಾಂತ್ಯದಲ್ಲಿ ಆರ್ಥಿಕ ಇಲಾಖೆಗೆ ಮರಳಿತ್ತು ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.

ರಾಜ್ಯ ಸರ್ಕಾರದ 2020ರ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಎಜಿ ಸಲ್ಲಿಸಿರುವ ಲೆಕ್ಕಪರಿಶೋಧನಾ ವರದಿಯನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ರಾಜ್ಯದ ಬಜೆಟ್‌ನಲ್ಲಿ ಅನುಮೋದಿತ ಒಟ್ಟು ವೆಚ್ಚದ ಮೊತ್ತದ ಪೈಕಿ 29 ವಿವಿಧ ಅನುದಾನಗಳ ಅಡಿಯಲ್ಲಿ ಬಜೆಟ್‌ನ ಒಟ್ಟು ಅನುಮೋದಿತ ವೆಚ್ಚದಶೇ 11ರಷ್ಟು ಬಳಕೆಯಾಗದೇ ಉಳಿದಿತ್ತು ಎಂಬ ಉಲ್ಲೇಖ ವರದಿಯಲ್ಲಿದೆ.

ಉಳಿದಿದ್ದ ಅನುದಾನದಲ್ಲಿ₹14,484.69 ಕೋಟಿಯನ್ನು (ಶೇ 49) ಮಾತ್ರ ನಿರ್ದಿಷ್ಟ ದಿನಾಂಕದೊಳಗೆ ಆರ್ಥಿಕ ಇಲಾಖೆಗೆ ಮರಳಿಸಲಾಗಿತ್ತು. ₹15,341.75 ಕೋಟಿ (ಶೇ 51) ಅನುದಾನವನ್ನು ಹಿಂದಿರುಗಿಸಿರಲಿಲ್ಲ. ₹11,374.87 ಕೋಟಿಯನ್ನು ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಮರಳಿಸಲಾಗಿತ್ತು ಎಂಬುದನ್ನು ಸಿಎಜಿ ಗುರುತಿಸಿದೆ.

‘ರಾಜ್ಯ ಸರ್ಕಾರದ ಬಜೆಟ್‌ ಹೆಚ್ಚು ವಾಸ್ತವಿಕವಾಗಿರಬೇಕು. ಅನುದಾನಗಳು ಬಳಕೆಯಾಗದೆ ಉಳಿಯುವುದನ್ನು ತಪ್ಪಿಸಲು ಬಜೆಟ್‌ ಅಂದಾಜು ಪ್ರಕ್ರಿಯೆಯಲ್ಲಿನ ನಿಯಂತ್ರಣವನ್ನು ಎಲ್ಲ ಇಲಾಖೆ ಗಳಲ್ಲೂ ಬಲಪಡಿಸಬೇಕು’ ಎಂದು ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.

ಅನಗತ್ಯ ಪೂರಕ ಅಂದಾಜು: ಕೆಲವು ಇಲಾಖೆಗಳಲ್ಲಿ ಬಜೆಟ್‌ನಲ್ಲಿ ಮಂಜೂರು ಮಾಡಿದ ಮೊತ್ತವನ್ನು ಸಂಪೂರ್ಣ ಬಳಕೆ ಮಾಡದೇ ಇದ್ದರೂ ಅವಾಸ್ತವಿಕವಾಗಿ ಪೂರಕ ಅಂದಾಜುಗಳನ್ನು ಮಂಡಿಸಿ, ಹೆಚ್ಚುವರಿ ಅನುದಾನ ಪಡೆಯಲಾಗಿತ್ತು. 11 ಅನುದಾನಗಳಲ್ಲಿನ ಒಂಬತ್ತು ಶೀರ್ಷಿಕೆಗಳ ಅಡಿಯಲ್ಲಿ ಈ ರೀತಿ₹ 340.97 ಕೋಟಿ ಪಡೆಯಲಾಗಿತ್ತು. 14 ಅನುದಾನಗಳಲ್ಲಿನ 12 ಶೀರ್ಷಿಕೆಗಳ ಅಡಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಮೊತ್ತದ ಪೂರಕ ಅಂದಾಜುಗಳನ್ನು ಮಂಜೂರು ಮಾಡಿದ್ದ ಕಾರಣದಿಂದ ₹1,680.15 ಕೋಟಿ ಬಳಕೆಯಾಗದೇ ಉಳಿದಿತ್ತು ಎಂದು ವರದಿ ಹೇಳಿದೆ.

‘12 ಅನುದಾನಗಳಲ್ಲಿ ಆರ್ಥಿಕ ವರ್ಷದ ಕೊನೆಯಲ್ಲಿ ₹5,369.27 ಕೋಟಿ ಬಳಕೆಯಾಗದೇ ಉಳಿದಿತ್ತು. ಆದರೆ, ಅದನ್ನು ರಾಜ್ಯ ಸರ್ಕಾರದ ಖಾತೆಗೆ ವಾಪಸ್‌ ಸಂದಾಯ ಮಾಡದೇ ಇರುವುದು ಕಂಡುಬಂದಿದೆ. ಪೂರಕ ಅಂದಾಜುಗಳನ್ನು ಹೆಚ್ಚು ವಾಸ್ತವಿಕ
ವಾಗಿ ಮತ್ತು ಅಗತ್ಯಕ್ಕೆ ತಕ್ಕಂತೆ ತಯಾರಿಸಬೇಕು. ಇದರಿಂದ ಅನವಶ್ಯಕ ಮತ್ತು ಅಧಿಕ ಅನುದಾನ ಮಂಜೂರಾತಿ ತಪ್ಪಿಸಬಹುದು’ ಎಂದು ಸಿಎಜಿ ಶಿಫಾರಸು ಮಾಡಿದೆ.

ನಗದು ಇದ್ದರೂ ಸಾಲ: ರಾಜ್ಯ ಸರ್ಕಾರ ತನ್ನ ಬಳಿ ನಗದು ಶಿಲ್ಕು ಇದ್ದರೂ ಅದನ್ನು ಬಳಕೆ ಮಾಡದೇ ಮಾರುಕಟ್ಟೆಯಲ್ಲಿ ಸಾಲ ಪಡೆದಿರುವುದಕ್ಕೆ ಸಿಎಜಿ ಆಕ್ಷೇಪಿಸಿದೆ.

2019–20ರಲ್ಲಿ ಸರ್ಕಾರ ₹ 48,499 ಕೋಟಿಯಷ್ಟು ಮಾರುಕಟ್ಟೆ ಸಾಲ ಪಡೆದಿತ್ತು. ಇದೇ ಅವಧಿಯಲ್ಲಿ ಸರ್ಕಾರದ ನಗದು ಶಿಲ್ಕು ₹ 5,139 ಕೋಟಿಯಿಂದ ₹ 13,634 ಕೋಟಿಯವರೆಗೂ ಇತ್ತು. ತನ್ನ ಬಳಿ ಲಭ್ಯವಿದ್ದ ಹಣವನ್ನು ಬಳಸಿಕೊಂಡಿದ್ದರೆ, ಸಾಲ ಮಾಡುವುದನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.

ಆರೋಗ್ಯ, ಶಿಕ್ಷಣ ನಿರ್ಲಕ್ಷ್ಯ: 2014–15ರಿಂದ 2019–20ರವರೆಗಿನ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹೆಚ್ಚು ವೆಚ್ಚ ಮಾಡಿಲ್ಲ. ಶಿಕ್ಷಣ ಕ್ಷೇತ್ರದ ಮೇಲಿನ ವೆಚ್ಚವು 2014–15ರಿಂದ 2018–19ರವರೆಗೂ ಇಳಿಕೆಯಾಗುತ್ತಲೇ ಇತ್ತು. 2019–20ರಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ನಿರಂತರವಾಗಿ ವೆಚ್ಚ ಕಡಿತವಾಗಿದೆ ಎಂಬ ಅಂಶ ವರದಿಯಲ್ಲಿದೆ.

2019–20ರಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ವೆಚ್ಚದಲ್ಲಿ ಕರ್ನಾಟಕವು ತನ್ನ ನೆರೆಯ ರಾಜ್ಯಗಳು ಹಾಗೂ ಸಮಾನ ದರ್ಜೆಯ ರಾಜ್ಯಗಳಿಗಿಂತ ಕೆಳ ಹಂತದಲ್ಲಿತ್ತು ಎಂದು ವರದಿ ಹೇಳಿದೆ.

ಅಂಕಿ ಅಂಶ

2019–20ರ ಬಜೆಟ್‌

– ಒಟ್ಟು ಅನುಮೋದಿತ ವೆಚ್ಚ– ₹2,63,804.67 ಕೋಟಿ

– ವಾಸ್ತವಿಕ ವೆಚ್ಚ– ₹ 2,33,978.23 ಕೋಟಿ

– ಬಳಕೆಯಾಗದೆ ಉಳಿದದ್ದು– ₹ 29,826.44 ಕೋಟಿ


ಪಿ.ಡಿ ಖಾತೆಗಳಲ್ಲೇ ಉಳಿದ ₹ 4,221 ಕೋಟಿ

2020ರ ಮಾರ್ಚ್‌ ಅಂತ್ಯಕ್ಕೆ ₹ 4,221.56 ಕೋಟಿ ಅನುದಾನ ಬಳಕೆ ಯಾಗದೇ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಅಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳಲ್ಲಿ ಉಳಿದಿತ್ತು. 2018–19ಕ್ಕೆ ಹೋಲಿಸಿ ದರೆ ಪಿ.ಡಿ ಖಾತೆಗಳಲ್ಲಿನ ಶಿಲ್ಕು ಮೂರು ಪಟ್ಟಾಗಿತ್ತು ಎಂದು ಸಿಎಜಿ ಹೇಳಿದೆ.

4 ವರ್ಷ: ಸಾಲ ಶೇ 84ರಷ್ಟು ಹೆಚ್ಚಳ

‌2015–16ನೇ ಆರ್ಥಿಕ ವರ್ಷದ ಅಂತ್ಯದಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹ 1,83,322 ಕೋಟಿ ಇತ್ತು. 2019–20ರ ಅವಧಿ ಯಲ್ಲಿ ಒಟ್ಟು ಸಾಲದ ಮೊತ್ತ ₹ 3,37,520 ಕೋಟಿಗೆ ಏರಿಕೆಯಾ ಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಸಾಲದ ಮೊತ್ತ ಶೇ84ರಷ್ಟು ಹೆಚ್ಚಿದೆ ಎಂಬ ಉಲ್ಲೇಖ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT