ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19–20ಕ್ಕೆ ಆರ್‌ಎಸ್‌ಎಸ್‌ನ ಪ್ರತಿನಿಧಿ ಸಭೆ

‘ಕೃಷಿ ಕಾಯ್ದೆ ಸೇರಿ ಸಮಾಜಮುಖಿ ವಿಷಯಗಳ ಬಗ್ಗೆ ಚರ್ಚೆ’* ಕೋವಿಡ್ ಕಾರಣ 450 ಪ್ರತಿನಿಧಿಗಳಿಗೆ ಮಾತ್ರ ಅವಕಾಶ
Last Updated 17 ಮಾರ್ಚ್ 2021, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಂದಿನ ಕಾರ್ಯಸೂಚಿ ಹಾಗೂ ಕಾರ್ಯಕ್ರಮಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಅಧಿವೇಶನ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ’ ಇದೇ 19 ಮತ್ತು 20ರಂದು ನಡೆಯಲಿದೆ. ಈ ಬಾರಿ ಕೇಂದ್ರದ ಕೃಷಿ ಕಾಯ್ದೆ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸಮಾಜಮುಖಿ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಅರುಣ್ ಕುಮಾರ್ ಮಾತನಾಡಿ, ‘ಎರಡು ದಿನಗಳ ಸಭೆಯು ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಲಿದೆ. ಪ್ರತಿ ಬಾರಿ 1,500 ಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಕೋವಿಡ್ ಕಾರಣ ಈ ಬಾರಿ 450 ಪ್ರತಿನಿಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಉಳಿದವರು ವರ್ಚುವಲ್ ಮಾದರಿಯಲ್ಲಿ ಸೇರಿಕೊಳ್ಳಲಿದ್ದಾರೆ. ಈ ಸಭೆಯಲ್ಲಿ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ. ಮುಂದಿನ ಮೂರು ವರ್ಷ ನಡೆಸಬಹುದಾದ ಸಮಾಜಮುಖಿ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಸಭೆಯು ಈ ಬಾರಿ ನಾಗಪುರದಲ್ಲಿ ನಡೆಯಬೇಕಾಗಿತ್ತು. ಆದರೆ, ಅಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಕಂಡಿರುವ ಕಾರಣ ಬೆಂಗಳೂರಿನಲ್ಲಿಯೇ ಆಯೋಜಿಸಲಾಗಿದೆ. ಮೂರು ದಿನಗಳು ನಡೆಯುತ್ತಿದ್ದ ಸಭೆಯನ್ನು ಈ ಬಾರಿ ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ.ಸರಸಂಘಚಾಲಕರಾದ ಮೋಹನ್ ಭಾಗವತ್‌ ಮತ್ತು ಸರಕಾರ್ಯವಾಹರಾದ ಸುರೇಶ್‌ (ಭಯ್ಯಾಜೀ) ಜೋಷಿಯವರು ಈ ಸಭೆಯ ಕಲಾಪಗಳನ್ನು ನಡೆಸಲಿದ್ದಾರೆ. ಕಳೆದ ಮೂರು ವರ್ಷ ಸಂಘ ಕೈಗೊಂಡ ಕಾರ್ಯಚಟುವಟಿಕೆಯನ್ನೂ ಮೌಲ್ಯಮಾಪನ ಮಾಡಲಾಗುತ್ತದೆ. ಸಂಘದ ವಾರ್ಷಿಕ ವರದಿ, ಸಂಘಟನೆಯ ವಿಸ್ತಾರ, ಹೊಸ ಆಯಾಮಗಳು, ಕಾರ್ಯಕ್ರಮಗಳು, ಮುಂಬರುವ ವರ್ಷದ ಯೋಜನೆ ಇತ್ಯಾದಿ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿದೆ’ ಎಂದು ವಿವರಿಸಿದರು.

ಸರಕಾರ್ಯವಾಹರ ಆಯ್ಕೆ

ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಮಾತನಾಡಿ, ಸರಕಾರ್ಯವಾಹರ ಆಯ್ಕೆಗೆ ಇದೇ ವೇಳೆ ಚುನಾವಣೆ ನಡೆಸಲಾಗುತ್ತದೆ. 289 ಅಖಿಲ ಭಾರತೀಯ ಪ್ರತಿನಿಧಿಗಳಿದ್ದು, ಇವರು ಮತದಾನ ಮಾಡಲಿದ್ದಾರೆ. ಸಾಧಾರಣವಾಗಿ ಸರ್ವಾನುಮತದಿಂದ ಆಯ್ಕೆ ನಡೆಯುತ್ತದೆ’ ಎಂದರು.

‘ಮುಂದಿನ ಮೂರು ವರ್ಷದ ಕಾರ್ಯಯೋಜನೆಯನ್ನು ಸಭೆಯಲ್ಲಿ ರೂಪಿಸಲಾಗುತ್ತದೆ. ನಮ್ಮ ಕಾರ್ಯದ ವಿಸ್ತಾರ ಭೌಗೋಳಿಕವಾಗಿ ಮಂಡಲದವರೆಗೂ ಆಗಬೇಕು. ನಗರ ಪ್ರದೇಶದಲ್ಲಿ 10 ಸಾವಿರ ಜನಸಂಖ್ಯೆಗೆ ವಸತಿ ಹಾಗೂ 2 ಸಾವಿರ ಜನಸಂಖ್ಯೆಗೆ ಉಪವಸತಿ ಮಟ್ಟದಲ್ಲಿ ಕಾರ್ಯದ ಬೆಳವಣಿಗೆ ದೃಷ್ಟಿಯಲ್ಲಿ ಏನು ಮಾಡಬೇಕು ಎಂದು ಚರ್ಚೆ ನಡೆಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT