ಮಂಗಳವಾರ, ಆಗಸ್ಟ್ 16, 2022
22 °C

ಆರ್‌ಎಸ್ಎಸ್ ವಿರುದ್ಧ ಹರಿಪ್ರಸಾದ್ ವಾಗ್ದಾಳಿ: ವಿಧಾನ ಪರಿಷತ್‌ನಲ್ಲಿ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾಯ್ದೆಯ ತಿದ್ದುಪಡಿ ಮಸೂದೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು 'ರಾಷ್ಟ್ರೀಯ ಸ್ವಯಂಸೇವಕ ಸಂಘ'(ಆರ್‌ಎಸ್ಎಸ್) ಕುರಿತು ಪರೋಕ್ಷ ವಾಗ್ದಾಳಿ ನಡೆಸಿದ್ದು ಬುಧವಾರ ವಿಧಾನ ಪರಿಷತ್‌ನಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಎಪಿಎಂಸಿ ತಿದ್ದುಪಡಿ ಮಸೂದೆ ವಿರೋಧಿಸಿ ಮಾತನಾಡಿದ ಹರಿಪ್ರಸಾದ್, 'ಕೇಂದ್ರ ಸರ್ಕಾರದ ಒತ್ತಡದಿಂದ ಈ ತಿದ್ದುಪಡಿ ತರಲಾಗಿದೆ. ಕಾರ್ಪೊರೇಟ್ ಕಂಪನಿಗಳ ಪರವಾಗಿ ಇವರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ' ಎಂದರು.

ಆಗ‌ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. 'ಎಲ್ಲರದ್ದೂ ಜಾತಕ ಬಿಚ್ಚಿಡ್ತೇನೆ ಅಂತಾರೆ.  ಇವರೇನು ಜ್ಯೋತಿಷಿಯಾ? ನಮಗೂ ಕುಂಡಲಿ, ಜಾತಕ ಎಲ್ಲ ಗೊತ್ತು' ಎಂದರು.

ಇಬ್ಬರ ನಡುವೆ ವಾಕ್ಸಮರ ನಡೆಯಿತು. 'ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದವನು. ಉತ್ತರ ಕೊಡಲು ಗೊತ್ತಿದೆ. ನಿಮ್ಮಂತೆ ರಾಷ್ಟ್ರೀಯ ಸುಲಭ್ ಶೌಚಾಲಯ(ಆರ್ ಎಸ್ ಎಸ್) ಯೂನಿವರ್ಸಿಟಿಯಲ್ಲಿ ತರಬೇತಿ ಪಡೆದಿಲ್ಲ' ಎಂದು ಪ್ರತ್ಯುತ್ತರ ನೀಡಿದರು.

ಕೆಲಕಾಲ ಮಾತಿನ ಚಕಮಕಿ‌ ಮುಂದುವರಿಯಿತು. ಹರಿಪ್ರಸಾದ್ ಪರೋಕ್ಷವಾಗಿ ಆರ್ ಎಸ್ ಎಸ್ ಅನ್ನು ಟೀಕಿಸಿದ್ದಾರೆ ಎಂಬುದು ಬಿಜೆಪಿ ಸದಸ್ಯರಿಗೆ ತಡವಾಗಿ ಗೊತ್ತಾಯಿತು. ಆಗ ಅವರು ಗುಂಪಾಗಿ ವಾಕ್ಸಮರಕ್ಕೆ ಇಳಿದರು. ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು.

ಹರಿಪ್ರಸಾದ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, 'ನೀವು ಏನು ಹೇಳಿದಿರಿ ಎಂಬುದು ನಮಗೆ ಗೊತ್ತಿದೆ. ನೋವು ಒಬ್ಬ ಹಿರಿಯ ಸದಸ್ಯ. ರಾಜ್ಯಸಭೆಯಲ್ಲಿ ಕೆಲಸ ಮಾಡಿದವರು. ಅಲ್ಲಿನ ನಡವಳಿಕೆ ಕಂಡು ತುಂಬಾ ಗೌರವ ಇತ್ತು. ಈಗ ಆಡಿರುವ ಮಾತು ನಿಮ್ಮ ಘನತೆಗೆ ಶೋಭೆ ತರುವಂತದ್ದಲ್ಲ' ಎಂದರು.

'ನಾನು ಇಲ್ಲಿಗೆ ಬಂದಿರುವುದು ನಿಮ್ಮನ್ನು ಖುಷಿಪಡಿಸಲು ಅಲ್ಲ ಎಂಬುದನ್ನು ಮೊದಲು ಸ್ಪಷ್ಟಪಡಿಸುತ್ತೇನೆ. ನಾನು ಆಡಿರುವ ಯಾವುದೇ ಮಾತುಗಳನ್ನು ವಾಪಸ್ ಪಡೆಯುವುದಿಲ್ಲ' ಎಂದು ಹರಿಪ್ರಸಾದ್ ಪ್ರತಿಕ್ರಿಯಿಸಿದರು.

'ರಾಷ್ಟ್ರೀಯ ಸುಲಭ್ ಶೌಚಾಲಯ ಯೂನಿವರ್ಸಿಟಿ' ಎಂಬ ಪದವನ್ನು ಕಡತದಿಂದ ತೆಗೆಯುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ಕೋರಿಕೆಯನ್ನು ತಿರಸ್ಕರಿಸಿದ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, 'ಕಡತದಿಂದ ತಗೆಯುವಂತಹದ್ದು ಏನಿದೆ ಎಂಬುದುನನಗೆ ಅರ್ಥವಾಗಿಲ್ಲ. ಏನು ತಪ್ಪಿದೆ ಎಂಬುದನ್ನು ಅರ್ಥ ಮಾಡಿಸಿ' ಎಂದರು.

ಮತ್ತೂ ಕೆಲಕಾಲ ವಾಕ್ಸಮರ ಮುಂದುವರಿಯಿತು. ಬಿಜೆಪಿ ಸದಸ್ಯರು ತಾವಾಗಿಯೇ ಸುಮ್ಮನಾದರು. ಹರಿಪ್ರಸಾದ್ ಚರ್ಚೆ ಮುಂದುವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು