ಶನಿವಾರ, ಜುಲೈ 2, 2022
20 °C
ಆರೆಸ್ಸೆಸ್‌ನತ್ತ ಯುವ ಸಮೂಹ– ಸಹ ಸರಕಾರ್ಯವಾಹ ಡಾ. ಮನಮೋಹನ ವೈದ್ಯ

‘3 ವರ್ಷಗಳಲ್ಲಿ ಎಲ್ಲ ಮಂಡಲಗಳಲ್ಲಿ ಶಾಖೆ’–ಡಾ.ಮನಮೋಹನ ವೈದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಮಂಡಲಗಳಲ್ಲಿ ಆರೆಸ್ಸೆಸ್‌ ಶಾಖೆ ಆರಂಭಿಸುವ ಯೋಜನೆಯಿದೆ’ ಎಂದು ಆರೆಸ್ಸೆಸ್‌ ಸಹ ಸರಕಾರ್ಯವಾಹ ಡಾ. ಮನಮೋಹನ ವೈದ್ಯ ಹೇಳಿದರು.

ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಎರಡು ದಿನ ನಡೆಯಲಿರುವ ಆರೆಸ್ಸೆಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್‌) ಉದ್ಘಾಟನೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಆರೆಸ್ಸೆಸ್‌ ಜೊತೆ ಸೇರಿ ಕೆಲಸ ಮಾಡುವ ಯುವ ಸಮೂಹದ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಶಾಖೆಗಳ ಸಂಖ್ಯೆ, ಗುಣಮಟ್ಟ ಹೆಚ್ಚಿಸುವ ಮತ್ತು ಯುವಕರನ್ನು ಜೋಡಿಸುವ ಕುರಿತು ಎಬಿಪಿಎಸ್‌ನಲ್ಲಿ ಚರ್ಚೆ ನಡೆಯಲಿದೆ’ ಎಂದರು.

‘ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಮಾರ್ಚ್‌ನಿಂದ ಜೂನ್‌ವರೆಗೆ ಶಾಖೆಗಳು ಸಂಪೂರ್ಣ ಬಂದ್ ಆಗಿದ್ದವು. ಜುಲೈ
ನಿಂದ ಮತ್ತೆ ಆರಂಭಗೊಂಡಿವೆ. ಕಳೆದ ವರ್ಷ ಮಾರ್ಚ್‌ಗೆ ಹೋಲಿಸಿದರೆ ಶೇ 89ನಷ್ಟು ಶಾಖೆಗಳು ಪುನರಾರಂಭ
ಗೊಂಡಿವೆ. ದೇಶದ 6,495 ತಾಲ್ಲೂಕುಗಳಲ್ಲಿ ಶೇ 85 ತಾಲ್ಲೂಕುಗಳಲ್ಲಿ ಶಾಖೆಗಳು ನಡೆಯುತ್ತಿವೆ. 58,500 ಮಂಡಲ
ಗಳಲ್ಲಿ ಶೇ 60 ಮಂಡಲಗಳಲ್ಲಿ ಶಾಖೆ ಅಥವಾ ಸಂಘದ ವಿವಿಧ ರೀತಿಯ ಚಟುವಟಿಕೆಗಳಿವೆ. ದೇಶದಲ್ಲಿ ನಡೆಯುತ್ತಿರುವ ಶಾಖೆಗಳ ಪೈಕಿ, ಶೇ 89ರಲ್ಲಿ ಯುವಕರು ಮತ್ತು ಬಾಲಕರು ಭಾಗವಹಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಲಾಕ್‌ಡೌನ್‌ ದಿನದಿಂದಲೇ ಸಂಘದ ಕಾರ್ಯಕರ್ತರು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 92,656 ಸ್ಥಾನಗಳಲ್ಲಿ ಸುಮಾರು 5,07 ಲಕ್ಷ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ಧಾವಿಸಿದರು. 73 ಲಕ್ಷ ಪಡಿತರ ಕಿಟ್, 4.5 ಕೋಟಿ ಆಹಾರ ಪೊಟ್ಟಣ, 90 ಲಕ್ಷ ಮಾಸ್ಕ್ ವಿತರಿಸಿದರು. 60 ಸಾವಿರ ಯುನಿಟ್ ರಕ್ತದಾನ ನಡೆಯಿತು. ಸಂಘದ ಜತೆಗೆ ಮಠ ಮಂದಿರಗಳು, ಅನೇಕ ಸಂಘ ಸಂಸ್ಥೆಗಳು ಸೇವೆ ಮಾಡಿವೆ’ ಎಂದರು.

ಎರಡು ನಿರ್ಣಯ: ‘ಇಡೀ ಸಮಾಜ ಏಕತೆ, ಸೇವಾಭಾವದಿಂದ ಕೊರೊನಾ ಸಂದರ್ಭದಲ್ಲಿ ಮಾಡಿದ ಕೆಲಸದ ಬಗ್ಗೆ ಚರ್ಚೆ ನಡೆಸಿ, ಅಭಿನಂದಿಸಲು ಎಬಿಪಿಎಸ್‌ ನಿರ್ಣಯ ಕೈಗೊಳ್ಳಲಿದೆ. ಜೊತೆಗೆ, ದೇಶದಾದ್ಯಂತ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು 5,45,737 ಗ್ರಾಮ– ನಗರಗಳನ್ನು ತಲುಪಿದ್ದಾರೆ. ಈ ಬಗ್ಗೆಯೂ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಿದೆ’ ಎಂದು ವೈದ್ಯ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವೈದ್ಯ, ‘ನಿಧಿ ಸಮರ್ಪಣಾ ಅಭಿಯಾನ ಸಂದರ್ಭದಲ್ಲಿ ದೇಣಿಗೆ ನೀಡಿಲ್ಲ ಎಂಬ ಕಾರಣಕ್ಕೆ ಅಂಥ ಮನೆಗಳನ್ನು  ಮಾರ್ಕ್ ಮಾಡುವ ಸಂಸ್ಕೃತಿ ನಮ್ಮದಲ್ಲ. ದೇಣಿಗೆ ಕೊಟ್ಟವರೂ ನಮ್ಮವರೆ. ಕೊಡದವರೂ ನಮ್ಮವರೆ’ ಎಂದರು.

ಎಬಿಪಿಎಸ್‌ ಆರಂಭ

ಎಬಿಪಿಎಸ್ ಅ‌ನ್ನು ಸರ ಸಂಘಚಾಲಕ್ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ಸುರೇಶ್ (ಭೈಯಾಜೀ) ಜೋಶಿ ಉದ್ಘಾಟಿಸಿದರು. 450 ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಶಾಖೆಯ ವಿಸ್ತಾರ ಸೇರಿದಂತೆ ಚಟುವಟಿಕೆಯ ವರದಿ, ಮುಂದಿನ ಕಾರ್ಯಯೋಜನೆ ಮತ್ತು ರಾಷ್ಟ್ರೀಯ ಮಹತ್ವದ ಪ್ರಮುಖ ವಿಷಯದ ಕುರಿತು ಎಬಿಪಿಎಸ್‌ನಲ್ಲಿ ಚರ್ಚೆ ನಡೆಯುತ್ತಿದೆ. ಆರೆಸ್ಸೆಸ್‌ಗೆ ಹೊಸ ಸರಕಾರ್ಯವಾಹರ ನೇಮಕಕ್ಕೆ ಶನಿವಾರ ಚುನಾವಣೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು