ಶನಿವಾರ, ಮಾರ್ಚ್ 25, 2023
25 °C

ಆರ್‌ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಪಟ್ಟಣದ ಆರ್‌ಟಿಐ ಕಾರ್ಯಕರ್ತ ಟಿ.ಶ್ರೀಧರ್ (38) ಅವರನ್ನು ಗುರುವಾರ ಸಂಜೆ ಮಾರಕಾಸ್ತ್ರಗಳೊಂದಿಗೆ ಬಂದ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿ, ಪರಾರಿಯಾಗಿದೆ.

ಎಡಿಬಿ ಕಾಲೇಜಿನ ಆವರಣದ ಸೈಕಲ್ ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಕ್ಯಾಂಟೀನ್ ಹಿಂಭಾಗದಲ್ಲಿ ಶ್ರೀಧರ್ ಕುರ್ಚಿಯ ಮೇಲೆ ಕುಳಿತಿದ್ದಾಗ ಸಂಜೆ ವೇಳೆಯಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರು ದುಷ್ಕರ್ಮಿಗಳು, ತಲೆ, ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಪರಾರಿಯಾದರು.

ಕ್ಯಾಂಟೀನ್ ಒಳಗಡೆ ಟೀ ಮಾಡುತ್ತಿದ್ದವ ತಕ್ಷಣವೇ ಠಾಣೆಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶ್ರೀಧರ್ ಅವರನ್ನು ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯೆಯೇ ಮೃತಪಟ್ಟರು.

ಶ್ರೀಧರ್‌ ಅವರು ಹಲವು ವರ್ಷಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು, ಗಣಿಗಾರಿಕೆ, ಅತಿಕ್ರಮಣ, ಸರ್ಕಾರಿ ಭೂಮಿ ಒತ್ತುವರಿ, ಅನಧಿಕೃತ ಕಲ್ಲು ಗಣಿಗಾರಿಕೆ ಹೀಗೆ ಹಲವು ವಿಷಯಗಳ ಬಗ್ಗೆ ದೂರು ದಾಖಲಿಸಿದ್ದರು. ಕೆಲ ಪ್ರಕರಣಗಳು ಇತ್ಯರ್ಥಗೊಂಡಿದ್ದರೆ, ಇನ್ನೂ ಕೆಲ ಪ್ರಕರಣಗಳು ತನಿಖಾ ಹಂತದಲ್ಲಿದ್ದವು. ಮಾಹಿತಿ ಹಕ್ಕು ಕಾರ್ಯಕರ್ತನ ಹತ್ಯೆ ಪಟ್ಟಣದ ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಆರ್‌ಟಿಐ ಕಾರ್ಯಕರ್ತನ ಮೇಲೆ ಹಲ್ಲೆ: ಬೆಂಗಳೂರಿನ ಹೊರವಲಯದಲ್ಲಿರುವ ತಾವರೆಕೆರೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್‌ (43) ಎಂಬುವರ ಮೇಲೆ ದುಷ್ಕರ್ಮಿಗಳು ಗುರುವಾರ ಹಲ್ಲೆ ನಡೆಸಿದ್ದಾರೆ.

ವೆಂಕಟೇಶ್‌ ತಾವರೆಕೆರೆಯಲ್ಲಿನ ಫಾರಂ ಹೌಸ್‌ನಲ್ಲಿದ್ದ ಸಂದರ್ಭ ನಾಲ್ಕೈದು ಜನರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಅವರ ಕೈ ಹಾಗೂ ಕಾಲಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೆಂಕಟೇಶ್ ಅನೇಕ ವರ್ಷದಿಂದ ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದರು. ಸಾಕಷ್ಟು ವಿರೋಧ ಬೆಳೆಸಿಕೊಂಡಿದ್ದು, ಈ ದ್ವೇಷದಿಂದ ಹಲ್ಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತನಿಖೆಗೆ ತಂಡ: ಆರೋಪಿಗಳ ಪತ್ತೆಗೆ ತಾವರೆಕೆರೆ, ಮಾಗಡಿ, ಕುದೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು