ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲಿಸುವುದು ಅವ್ಯವಹಾರವೇ?: ಶಿಕ್ಷಣ ಇಲಾಖೆ

Last Updated 5 ಸೆಪ್ಟೆಂಬರ್ 2022, 22:14 IST
ಅಕ್ಷರ ಗಾತ್ರ

ಬೆಂಗಳೂರು: ಶೈಕ್ಷಣಿಕ ಗುಣಮಟ್ಟಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಿ, ಕ್ರಮ ಕೈಗೊಳ್ಳಬೇಕಾಗುತ್ತದೆ. ಅದನ್ನೇ ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಧಕ ಎಂದುಕೊಂಡರೆ ಹೇಗೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಪ್ರಶ್ನಿಸಿದ್ದಾರೆ.

ಕಟ್ಟಡ ಸುರಕ್ಷತೆ, ಸಂಭವನೀಯ ಅಗ್ನಿ ದುರಂತದ ಸಮಯದಲ್ಲಿನ ಮುಂಜಾಗ್ರತಾ ಕ್ರಮಗಳ ಕುರಿತು ಸರ್ಕಾರ 2018ರಲ್ಲಿ ನಿಯಮಗಳನ್ನು ಜಾರಿಗೆ ತಂದಿದೆ. ಶಾಲಾ ನವೀಕರಣಕ್ಕೆ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆಯ ವೇಳೆ ಪ್ರಮಾಣಪತ್ರ ಲಗತ್ತಿಸುವುದು ಕಡ್ಡಾಯ. ಇಲ್ಲದಿದ್ದರೆ ನವೀಕರಣ ವಿಳಂಬವಾಗುವುದು ಸಹಜ. ಅದನ್ನೇ ಅವ್ಯವಹಾರ ಎಂದು ಬಿಂಬಿಸಿರುವುದು ಸರಿಯಲ್ಲ ಎಂದಿದ್ದಾರೆ.

ಬಿಇಒ, ಡಿಡಿಪಿಐ ಮತ್ತಿತರ ಅಧಿಕಾರಿಗಳು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಹಣ ನೀಡುತ್ತಾರೆ ಎಂಬ ಆರೋಪವೂ ಸತ್ಯಕ್ಕೆ ದೂರವಾಗಿದೆ. ಅಲ್ಲದೇ, ಒಂದು ಸ್ಥಳದಲ್ಲಿ ಕಾರ್ಯನಿರ್ವಹಿಸುವ ಗರಿಷ್ಠ ಸೇವಾ ಅವಧಿಯನ್ನು ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸುವ ಯಾವ ಆದೇಶವನ್ನೂ ಇಲಾಖೆ ಹೊರಡಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಿವೃತ್ತಿಯ ನಂತರ ಶಿಕ್ಷಕರು ನಿವೃತ್ತಿ ವೇತನ, ಪರಿಹಾರ, ಪಿಂಚಣಿ ಪಡೆಯಲು ಲಂಚ ನೀಡಬೇಕು ಎನ್ನುವ ಆರೋಪಗಳಲ್ಲೂ ಹುರುಳಿಲ್ಲ. ನೌಕರರು ನಿವೃತ್ತಿಯಾಗುವ ಮೂರು ತಿಂಗಳ ಮೊದಲೇ ಮಹಾಲೇಖಪಾಲಕರಿಗೆ ವರದಿ ಸಲ್ಲಿಸಲಾಗಿರುತ್ತದೆ. ಶಿಸ್ತು ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಯ ಪ್ರಕರಣಗಳು ಇತ್ಯರ್ಥವಾದ ನಂತರ ಅರ್ಜಿಗಳು ವಿಲೇವಾರಿಯಾಗುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇಲಾಖೆಯ ಅಧಿಕಾರಿಗಳು ನಿಯಮದ ಪ್ರಕಾರ ಖಾಸಗಿ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಅಗತ್ಯ ದಾಖಲೆಗಳನ್ನು ನೀಡಬೇಕಾದ ಖಾಸಗಿ ಸಂಸ್ಥೆಗಳು ಹಾಗೆ ಮಾಡದೆ ವಸೂಲಿಗಾಗಿ ಎಂದು ಆರೋಪ ಮಾಡುವುದು, ಎನ್‌ಒಸಿ ಪಡೆಯಲು ಭರಿಸುವ ಶುಲ್ಕವನ್ನೇ ಲಂಚ ಎಂದು ಬಿಂಬಿಸುವುದು ಸರಿಯಲ್ಲ. ಲೋಪಗಳ ನಿರ್ದಿಷ್ಟ ಪ್ರಕರಣಗಳನ್ನು ಗಮನಕ್ಕೆ ತಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT