ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಲ್ಲಿ ಗ್ರಾಮೀಣ ಬಸ್‌ ಸಂಚಾರ ಸ್ಥಗಿತ: ವಿದ್ಯಾರ್ಥಿಗಳಿಗೆ ಕಾಲ್ನಡಿಗೆ ಶಿಕ್ಷೆ

ಮಲೆನಾಡು ಭಾಗಗಳಲ್ಲಿ ಸ್ಥಗಿತಗೊಂಡ ಗ್ರಾಮೀಣ ಬಸ್‌ ಸಂಚಾರ
Last Updated 29 ನವೆಂಬರ್ 2022, 20:19 IST
ಅಕ್ಷರ ಗಾತ್ರ

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್‌ ಸೌಲಭ್ಯ ಇಲ್ಲದ್ದರಿಂದ ಶಾಲೆ–ಕಾಲೇಜಿಗೆ ತೆರಳಲು ನಿತ್ಯವೂ 10ರಿಂದ 14 ಕಿ.ಮೀ ನಡೆದುಕೊಂಡು ಹೋಗಬೇಕಿದೆ.

ಈ ಹಿಂದೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸೌಲಭ್ಯ ನೀಡುತ್ತಿದ್ದ ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ನಷ್ಟದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಹೀಗಾಗಿ ಹೆದ್ದಾರಿಗಳಲ್ಲಿ ಸಾಗುವ ಸಾರಿಗೆ ಸಂಸ್ಥೆ ಬಸ್‌ ಹಿಡಿಯಲು ಕಿ.ಮೀ.ಗಟ್ಟಲೇ ಕಾಡಿನ ದುರ್ಗಮ ಹಾದಿಯಲ್ಲಿ ಮಕ್ಕಳು ನಡೆಯಬೇಕಿದೆ. ಪಾಲಕರು ಹೆಣ್ಣು ಮಕ್ಕಳನ್ನು ಸುರಕ್ಷತೆ ದೃಷ್ಟಿಯಿಂದ ಶಾಲೆ ಬಿಡಿಸುತ್ತಿದ್ದಾರೆ.

ಶ್ರೀಮಂತರು ಖಾಸಗಿ ವಾಹನ, ಆಟೊರಿಕ್ಷಾ, ಬೈಕ್‌ ಮೂಲಕ ಮಕ್ಕಳನ್ನು ಕಳಿಸುತ್ತಾರೆ. ಆದರೆ, ಬಡ ಕುಟುಂಬದ ಮಕ್ಕಳು ನಡೆದು ಶಾಲೆ ತಲುಪಬೇಕಿದೆ.

‘ಬಸ್‌ ಇಲ್ಲದ ಕಾರಣ ಶಾಲೆ ಬಿಡಿಸಿರುವುದಾಗಿ ಪಾಲಕರು ಹೇಳುತ್ತಾರೆ. ಆ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಕಸರತ್ತು ನಡೆಸಿದ್ದೇವೆ’ ಎಂದು ನಾಲೂರು ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ್‌ ಗಾರ್ಡರಗದ್ದೆ ‘ಪ್ರಜಾವಾಣಿ’ಗೆ ತಿಳಿಸಿದರು.

ವರಾಹಿ ಮುಳುಗಡೆ ಪ್ರದೇಶದ ನಾಲೂರು ಭಾಗದ ಕೊರನಕೋಟೆ, ಕುಂಜಳ್ಳಿ, ಶುಂಠಿಹಕ್ಲು ವಿದ್ಯಾರ್ಥಿಗಳು 3ರಿಂದ 8 ಕಿ. ಮೀ. ನಡೆದು ಗಾರ್ಡರಗದ್ದೆ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಹೊಸನಗರ ತಾಲ್ಲೂಕಿನ ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳಿದ್ದು, ಅವರಲ್ಲಿ ಮೇಲುಸುಂಕದಿಂದ 10 ಮಂದಿ ನಿತ್ಯ 8 ಕಿ.ಮೀ ನಡೆದು ಬರುತ್ತಿದ್ದಾರೆ.

----

ಕೊರನಕೋಟೆ ಮಾರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತು ಮನವಿ ಬಂದಿಲ್ಲ. ಬಸ್‌ ಸಮಯ ಬದಲಾವಣೆ ಮಾಡಿದರೆ ಹೊನ್ನೇತ್ತಾಳು, ಕುಂದಾ, ಶೀರೂರು, ಅರೇಹಳ್ಳಿ ಮಾರ್ಗದ ವಿದ್ಯಾರ್ಥಿ
ಗಳಿಗೆ ತೊಂದರೆಯಾಗುತ್ತದೆ.

- ಸೋಮಶೇಖರಪ್ಪ,ವ್ಯವಸ್ಥಾಪಕ, ಕೆಎಸ್‌ಆರ್‌ಟಿಸಿ ಘಟಕ ಶಿವಮೊಗ್ಗ

ಬಸ್‌ ಇಲ್ಲದೆ ವಿದ್ಯಾರ್ಥಿಗಳು ಶಾಲೆ ಬಿಡುತ್ತಿರುವ ವಿಷಯ ಗಮನಕ್ಕೆ ಬಂದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಎಸ್ಕಾರ್ಟ್‌ ಭತ್ಯೆ ಅಡಿ ತಿಂಗಳಿಗೆ ₹ 200 ನೀಡುವ ಅವಕಾಶ ಇದೆ. ಸಂಪರ್ಕ ಇಲ್ಲದ ಮಲೆನಾಡು ಭಾಗದ ವಿದ್ಯಾರ್ಥಿಗಳ ಸಾರಿಗೆ ಸಂಪರ್ಕಕ್ಕೆ ಕ್ರಿಯಾಯೋಜನೆ
ಸಿದ್ಧಪಡಿಸಲಾಗುತ್ತದೆ

- ಸಿ.ಆರ್. ಪರಮೇಶ್ವರಪ್ಪ,ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT