ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವ್ಯವಸ್ಥೆಯಿಂದ ಧರ್ಮೇಗೌಡರ ಕೊಲೆ: ಎಚ್‌.ಡಿ ಕುಮಾರಸ್ವಾಮಿ

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪ
Last Updated 29 ಡಿಸೆಂಬರ್ 2020, 7:00 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರು ಸದನದಲ್ಲಿ ನಡೆದಿದ್ದ ಬೆಳವಣಿಗೆಗಳಿಂದ ತೀವ್ರವಾಗಿ ನೊಂದಿದ್ದರು. ಈ ರಾಜಕೀಯ ವ್ಯವಸ್ಥೆಯಿಂದಲೇ ಅವರ ಕೊಲೆಯಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದರು.

ಧರ್ಮೇಗೌಡರ ಸಾವಿನ ಕುರಿತು ಮಂಗಳವಾರ ಪ್ರತಿಕ್ರಿಯೆ ನೀಡಿರುವ ಅವರು, ‘ತೀವ್ರವಾಗಿ ನೊಂದಿದ್ದ ಅವರಿಗೆ ನಾನು ಮತ್ತು ಎಚ್‌.ಡಿ. ದೇವೇಗೌಡ ಧೈರ್ಯ ತುಂಬಿದ್ದೆವು. ಕಾನೂನು ಮತ್ತು ಸದನದ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಒತ್ತಡಗಳಿಗೆ ಮಣಿಯಬೇಡ ಎಂದು ದೇವೇಗೌಡರು ಸಲಹೆ ನೀಡಿದ್ದರು. ಆ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ’ ಎಂದರು.

ಕೆಲವು ವ್ಯಕ್ತಿಗಳ ಪಾತ್ರದ ಕುರಿತು ಹೇಳಿದರೆ ಅವರಿಗೆ ನೋವಾಗಬಹುದು. ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳು ತಮ್ಮ ತಮ್ಮ ಪಾತ್ರಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

‘ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ಸಭಾಪತಿ ಕೊಟ್ಟ ನೋಟಿಸ್‌ಗೆ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಧರ್ಮೇಗೌಡರ ವಿರುದ್ಧ ಆಪಾದನೆ ಹೊರಿಸಿ ಒಂದೂವರೆ ಪುಟಗಳ ವರದಿಯನ್ನು ಸಭಾಪತಿಗೆ ಸಲ್ಲಿಸಿದ್ದರು. ಸತ್ಯಾಸತ್ಯತೆ ಪರಿಶೀಲಿಸಲು ನಮ್ಮ ಪಕ್ಷದ ‘ಪ್ರಾಮಾಣಿಕ’, ನೇರವಾದಿ ರಾಜಕಾರಣಿ ಮರಿತಿಬ್ಬೇಗೌಡ ಎಂಬುವವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದರು ಎಂಬ ಮಾಹಿತಿ ನನಗೆ ಮಂಗಳವಾರ ಬೆಳಿಗ್ಗೆ ಲಭಿಸಿದೆ’ ಎಂದು ಕುಮಾರಸ್ವಾಮಿ ಹೇಳಿದರು.

ನಿಜವಾದ ಧರ್ಮರಾಯ

‘ಅಂತಿಮವಾಗಿ ರಾಜಕೀಯ ವ್ಯವಸ್ಥೆಯಿಂದ ಆ ವ್ಯಕ್ತಿಯ ಕೊಲೆಯಾಗಿದೆ. ಧರ್ಮೇಗೌಡ ನಿಜವಾದ ಅರ್ಥದಲ್ಲಿ ಧರ್ಮರಾಯ ಆಗಿದ್ದರು. ಅವರ ತಮ್ಮ ಭೋಜೇಗೌಡ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದರು. ಇವತ್ತಿನ ರಾಜಕಾರಣದ ಧರ್ಮರಾಯನನ್ನು ನಾನು ಕಳೆದುಕೊಂಡಿದ್ದೇನೆ’ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದರು.

‘ರಾಜಕೀಯ ಇರುತ್ತೆ, ಹೋಗುತ್ತೆ. ನಾವು ಯಾರೂ ಶಾಶ್ವತವಲ್ಲ. ಈಗ ಧರ್ಮೇಗೌಡರಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಕಾನೂನುಬಾಹಿರ ಚಟುವಟಿಕೆ ಮಾಡಿ, ಸಾರ್ವಜನಿಕ ಸಂಪತ್ತು ಲೂಟಿ ಮಾಡಿದವರು ಬದುಕುತ್ತಾರೆ. ಇಂತಹ ಸೂಕ್ಷ್ಮ ವ್ಯಕ್ತಿತ್ವದವರೂ ಇದ್ದಾರೆ. ಮುಂದಿನ ದಿನಗಳಲ್ಲಿ ರಾಜಕಾರಣದ ಹೆಸರಿನಲ್ಲಿ ಯಾರ ಜೊತೆಗೂ ಆಟ ಆಡಬೇಡಿ ಎಂದು ಮನವಿ ಮಾಡುತ್ತೇನೆ’ ಎಂದರು.

ಬಹುಮತ ಇಲ್ಲದಿರುವುದು ಖಾತರಿ ಆದ ಮೇಲೆ ರಾಜೀನಾಮೆ ಸಲ್ಲಿಸಿದ್ದರೆ ಏನಾಗುತ್ತಿತ್ತು? ದೇವೇಗೌಡರನ್ನು ಬದ್ಧತೆಯನ್ನು ಪ್ರಶ್ನಿಸಲು ರಾಜಕೀಯ ಆಟ ಆಡಿದರು. ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವುದು ತಪ್ಪು. ಇದು ವ್ಯವಸ್ಥೆಯ ಕೊಲೆ. ಯಾವ ಕಾರಣಕ್ಕಾಗಿ ಈ ಸಾವು ಸಂಭವಿಸಿದೆ ಎಂಬುದನ್ನು ತಿಳಿಯಲು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

‘ಸಿದ್ಧಾರ್ಥ ಆತ್ಮಹತ್ಯೆ ಕುರಿತು ಚರ್ಚಿಸಿದ್ದರು’

‘ಧರ್ಮೇಗೌಡರು ಸಾಯುವ ನಿರ್ಧಾರಕ್ಕೆ ಮೊದಲೇ ಬಂದಿದ್ದರು ಎಂಬಂತೆ ಕಾಣುತ್ತಿದೆ. ಅವರಿಗೆ ಚೆನ್ನಾಗಿ ಈಜಲು ಬರುತ್ತದೆ. ಆದ್ದರಿಂದ ನೀರಿಗೆ ಹಾರಿದರೆ ಬದುಕಿ ಉಳಿಯುವ ಸಾಧ್ಯತೆ ಇದೆ ಎಂದು ಭಾವಿಸಿದ್ದರು. ಎಸ್‌.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕುರಿತು ಎರಡು ದಿನಗಳ ಹಿಂದೆ ಮನೆಯಲ್ಲಿ ಚರ್ಚಿಸಿದ್ದರು ಎಂಬ ಮಾಹಿತಿ ಈಗ ನನಗೆ ಗೊತ್ತಾಗಿದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT