ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಬರಮತಿ ಆಶ್ರಮ ಸಾರ್ವಜನಿಕರ ವೀಕ್ಷಣೆಗೆ ಮುಕ್ತ

ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಗಾಂಧೀಜಿ ಸ್ಮರಣೆ
Last Updated 1 ಡಿಸೆಂಬರ್ 2020, 3:45 IST
ಅಕ್ಷರ ಗಾತ್ರ

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ನೂತನ ಆವರಣದಲ್ಲಿ ನಿರ್ಮಾಣಗೊಂಡಿರುವ ಸಾಬರಮತಿ ಆಶ್ರಮ ಡಿ.1ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಾಣಿಸುವ ಕಪ್ಪತಗುಡ್ಡದ (ನಾಗಾವಿ ಗುಡ್ಡ) ಸೊಬಗು, ಬೋಳು ಬೆಟ್ಟದ ಚೆಲುವಿಗೆ ಗರಿ ಸಿಕ್ಕಿಸಿದಂತೆ ಕಾಣಿಸುವ ಪವನ ಶಕ್ತಿ ಯಂತ್ರಗಳು, ಕುರುಚಲು ಗಿಡಗಳ ರಮ್ಯ ಪರಿಸರದ ನಡುವೆ ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಭಾಸವಾಗುವ ಸಾಬರಮತಿ ಆಶ್ರಮ ಶೈಕ್ಷಣಿಕ ಚಟುವಟಿಕೆಗಳಿಗೆ ಇಂಬು ನೀಡುವ ಜತೆಗೆ ಇನ್ನು ಮುಂದೆ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಳ್ಳಲಿದೆ.

ಗದುಗಿಗೆ ಗಾಂಧೀಜಿ ಭೇಟಿ ನೀಡಿ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳು ನಡೆಯುತ್ತಿದ್ದು, ಆಶ್ರಮದಲ್ಲಿ ಶತಮಾನೋತ್ಸವ ಆಚರಣೆ ಪ್ರಯುಕ್ತವಾಗಿ ಪ್ರತಿ ತಿಂಗಳ 11ರಂದು ‘ಗಾಂಧಿ ಚಿಂತನ– ಮಂಥನ’, ‘ಗಾಂಧಿ ಸತ್ಸಂತ’ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇರೀತಿ, ವಾರಾಂತ್ಯದಲ್ಲಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುವ ಪ್ರವಾಸಿಗರು, ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧೀಜಿ ಜೀವನ ಕುರಿತಾದ ಪ್ರಮುಖ ಮಾಹಿತಿಗಳನ್ನು ತಿಳಿಸಿಕೊಡುವ ಯೋಜನೆ ರೂಪುಗೊಳಿಸಲಾಗಿದೆ.

‘ಸಾಬರಮತಿ ಆಶ್ರಮ ಗಾಂಧಿ ಚಿಂತನೆ ಹಾಗೂ ತತ್ವಗಳ ಮೇಲೆ ರೂಪುಗೊಂಡಿದೆ. ಇಲ್ಲಿಗೆ ಭೇಟಿ ನೀಡಿದವರಿಗೆ ಗಾಂಧೀಜಿ ಚಿಂತನೆ, ಸಂದೇಶಗಳನ್ನು ತಿಳಿಸಿಕೊಡುವುದರ ಜತೆಗೆ ಸಾಬರಮತಿ ಆಶ್ರಮವನ್ನು ಪಂಚಾಯತ್‌ ರಾಜ್‌ ವಿವಿ ಆವರಣದಲ್ಲಿ ಏಕೆ ನಿರ್ಮಿಸಲಾಗಿದೆ, ಕೃಷಿ ಕ್ಷೇತ್ರದಲ್ಲಿನ ಸುಸ್ಥಿರ ಅಭಿವೃದ್ಧಿ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ವಿವಿ ವತಿಯಿಂದ ಏನೆಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೂ ಗುಡಿ ಕೈಗಾರಿಕೆ, ಪಶುಸಂಗೋಪನೆ ಕುರಿತಂತೆ ಮಾಹಿತಿ ಒದಗಿಸಲಾಗುವುದು’ ಎನ್ನುತ್ತಾರೆ ಸಾಬರಮತಿ ಆಶ್ರಮದ ಸಂಚಾಲಕ ಪ್ರಕಾಶ್‌ ಮಾಚೇನಹಳ್ಳಿ.

ಗದುಗಿಗೆ ಭೇಟಿ ನೀಡುವ ಪ್ರವಾಸಿಗರು ಬೆಳಿಗ್ಗೆ 10ರಿಂದ ಮಧ್ಯಾಹ್ನ 1, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಆಶ್ರಮವನ್ನು ವೀಕ್ಷಣೆ ಮಾಡುವ ಅವಕಾಶ ಇದೆ. ಪ್ರತಿ ತಿಂಗಳ 11ರಂದು ನಡೆಯುವ ‘ಗಾಂಧಿ ಚಿಂತನ– ಮಂಥನ’ ಕಾರ್ಯಕ್ರಮ ಸಂಜೆ 5ರಿಂದ 6ರವರೆಗೆ ನಡೆಯಲಿದೆ.

‘ಜಿಲ್ಲೆಯ ಸುತ್ತಮುತ್ತಲಿನ ಜನ ವಾರಾಂತ್ಯದ ಪಿಕ್‌ನಿಕ್‌ಗೆ ಸಾಬರಮತಿ ಆಶ್ರಮ ಆಯ್ದುಕೊಳ್ಳಬಹುದು. ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಸ್ಥಳದಲ್ಲಿ ಇದು ರೂಪುಗೊಂಡಿದೆ. ಇಲ್ಲಿಗೆ ಬಂದವರು ಗಾಂಧೀಜಿ ಬಗ್ಗೆ ತಿಳಿದುಕೊಳ್ಳುವ ಜತೆಗೆ ಪ್ರಾಕೃತಿಕ ಸೊಬಗನ್ನೂ ಕಣ್ತುಂಬಿಕೊಳ್ಳಬಹುದು. ಸುಂದರ ಪರಿಸರದಲ್ಲಿ ಕುಳಿತು ಸಹ– ಭೋಜನ ಸವಿಯಬಹುದು. ಅಂತೆಯೇ, ಸ್ಮೃತಿ ವನದಲ್ಲಿ ತಮ್ಮ ಪ್ರೀತಿ ಪಾತ್ರರ ಹೆಸರಿನಲ್ಲಿ ಗಿಡ ನೆಡುವ ಅವಕಾಶವನ್ನೂ ಕಲ್ಪಿಸಲಾಗಿದೆ’ ಎನ್ನುತ್ತಾರೆ ಪ್ರಕಾಶ್‌ ಮಾಚೇನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT