ಶುಕ್ರವಾರ, ಸೆಪ್ಟೆಂಬರ್ 25, 2020
22 °C
ಈಶ ಫೌಂಡೇಷನ್‌

ನವೆಂಬರ್‌ ವೇಳೆಗೆ 1.10 ಕೋಟಿ ಸಸಿ ವಿತರಣೆ: ಸದ್ಗುರು ಜಗ್ಗಿ ವಾಸುದೇವ್ ವಿವರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದ್ಗುರು ಜಗ್ಗಿ ವಾಸುದೇವ್

ಬೆಂಗಳೂರು: ‘ಕಾವೇರಿ ಕೂಗು ಅಭಿಯಾನದ ಭಾಗವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕೊಳ್ಳದ ಪ್ರದೇಶದಲ್ಲಿ ನವೆಂಬರ್ ವೇಳೆಗೆ 1.10 ಕೋಟಿ ಸಸಿಯನ್ನು ರೈತರಿಗೆ ವಿತರಿಸುವ ಗುರಿ ಹೊಂದಲಾಗಿದೆ’ ಎಂದು ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ವೆಬಿನಾರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕರ್ನಾಟಕದಲ್ಲಿ 50 ಲಕ್ಷ ಮತ್ತು ತಮಿಳುನಾಡಿನಲ್ಲಿ 11 ಲಕ್ಷ ಸಸಿಗಳನ್ನು ಈಗಾಗಲೇ ವಿತರಿಸಲಾಗಿದೆ. ಕರ್ನಾಟಕದಲ್ಲೇ ಈ ವರ್ಷ 72 ಲಕ್ಷ ಸಸಿಗಳನ್ನು ವಿತರಿಸುವ ಗುರಿ ಇದೆ’ ಎಂದು ಹೇಳಿದರು.

‘2 ಕೋಟಿಗೂ ಹೆಚ್ಚು ಸಸಿ ವಿತರಣೆ ಮಾಡುವ ಗುರಿ ಇತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ಬೇಡಿಕೆ ಕಡಿಮೆಯಾಗಲಿದೆ ಎಂದು ಭಾವಿಸಿಕೊಂಡೆವು. ಆದರೆ, ಬೇಡಿಕೆ ಕಡಿಮೆಯಾಗಿಲ್ಲ. ರೈತರು ಸಲ್ಲಿಸಿರುವ ಬೇಡಿಕೆಗೆ ತಕ್ಕಂತೆ ಸಸಿ ವಿತರಣೆ ಮಾಡಲು ಈ ವರ್ಷ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ರೈತರ ಬೇಡಿಕೆ ಪೂರೈಸಲಾಗುವುದು’ ಎಂದರು.

‘ಮರ ವ್ಯವಸಾಯ ಪದ್ಧತಿ ಅನುಸರಿಸುವವರಿಗೆ ಮೂರು ವರ್ಷದ ತನಕ ಆದಾಯ ಇರುವುದಿಲ್ಲ. ನಾಲ್ಕನೇ ವರ್ಷದಿಂದ ಆದಾಯ ಶುರುವಾಗುತ್ತದೆ. ಮರ ಕಟಾವು ಮಾಡಲು ಅನುಮತಿ ಪಡೆಯಲು ರೈತರು ವಿವಿಧ ಇಲಾಖೆಗಳಿಗೆ ಸುತ್ತಬೇಕಿದೆ. ಈ ಪ್ರಕ್ರಿಯೆ ಸುಲಭಗೊಳಿಸಲು ಕೇಂದ್ರ ಸರ್ಕಾರ ಆನ್‌ಲೈನ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಇದು ಜಾರಿಯಾದರೆ ಮರ ವ್ಯವಸಾಯ ಪದ್ಧತಿ ಇನ್ನಷ್ಟು ಹೆಚ್ಚಳವಾಗಲಿದೆ’ ಎಂದು ಹೇಳಿದರು.

‘ಕಾವೇರಿ ಕೂಗು ಯೋಜನೆಯು ಕಾವೇರಿ ಜಲಾನಯನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶ ಕೂಡ ಇದರಲ್ಲಿ ಸೇರಿದೆ. ಇದಕ್ಕೆ ಧರ್ಮಸ್ಥಳ, ಸುತ್ತೂರು ಮಠ, ಅರಣ್ಯ ಇಲಾಖೆಯ ಪ್ರೋತ್ಸಾಹ ಸಾಕಷ್ಟು ದೊರೆತಿದೆ’ ಎಂದರು.

‘ಕೋವಿಡ್‌ ಕಾರಣದಿಂದ ನಗರಗಳಿಂದ ಹಳ್ಳಿಗಳತ್ತ ಯುವಕರು ಮರು ವಲಸೆ ಆರಂಭಿಸಿದ್ದಾರೆ. ಕೃಷಿ ಜತೆಗೆ ಮರ ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಅತಿಯಾದ ಮಳೆಯಿಂದ ನೆರೆ ಹಾವಳಿ ಸಂಭವಿಸುತ್ತಿಲ್ಲ. ಈ ಹಿಂದೆ ವರ್ಷಕ್ಕೆ 80ರಿಂದ 100 ದಿನ ಮಳೆಯಾಗುತ್ತಿತ್ತು. ಈಗ 40ರಿಂದ 80 ದಿನಗಳಿಗೆ ಇಳಿದಿದೆ. ಒಂದು ಅಥವಾ ಎರಡು ದಿನಗಳ‌ಲ್ಲೇ ಹೆಚ್ಚು ಮಳೆ ಸುರಿಯುತ್ತಿದೆ. ಅದನ್ನು ನಿರ್ವಹಿಸಲು ಸಾಧ್ಯವಾಗುವಷ್ಟು ಕೆರೆ, ಕಟ್ಟೆ, ಜಲಾಶಯ ಇಲ್ಲದ ಕಾರಣ ನೆರೆ ಎಂದು ಭಾಸವಾಗುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು