ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ಸ್ಪಂದನೆ: ₹39,600 ಕೋಟಿ ಸಾಲ’- ಬಿ.ಎಸ್‌. ಯಡಿಯೂರಪ್

67ನೇ ಅಖಿಲ ಭಾರತ ಸಹಕಾರ ಸಪ್ತಾಹ–2020 l 29 ಸಾಧಕರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ
Last Updated 14 ನವೆಂಬರ್ 2020, 18:04 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಕೃಷಿ ಕ್ಷೇತ್ರ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ ಬೆಳೆಸಲು ಕೃಷಿ, ಹಾಲು ಮತ್ತು ಕೃಷಿಯೇತರ ಚಟುವಟಿಕೆಗೆ ಸಹಕಾರ ಇಲಾಖೆಯ ‘ಆರ್ಥಿಕ ಸ್ಪಂದನೆ’ ಕಾರ್ಯಕ್ರಮದಡಿ ₹ 39,600 ಕೋಟಿ ಸಾಲ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ‘67ನೇ ಅಖಿಲ ಭಾರತ ಸಹಕಾರ ಸಪ್ತಾಹ–2020’ ಉದ್ಘಾಟಿಸಿ ಮಾತನಾಡಿದ ಅವರು, ‘ಸಹಕಾರ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆಗಳನ್ನು ಘೋಷಿಸಿದೆ. ರೈತ ಉತ್ಪಾದಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ರಾಜ್ಯಕ್ಕೆ ₹4,525 ಕೋಟಿ ಹಂಚಿಕೆ ಮಾಡಿದೆ’ ಎಂದರು.

‘ಕೇಂದ್ರದ ಅನುದಾನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗೋದಾಮು, ಕೊಯ್ಲು ನಂತರದ ಪರಿಷ್ಕರಣೆ, ಕೃಷಿ ಉತ್ಪನ್ನಗಳನ್ನು ರೈತರ ಜಮೀನಿನಿಂದಲೇ ಸಾಗಿಸಲು ಸಾರಿಗೆ ವ್ಯವಸ್ಥೆ, ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಈ ಯೋಜನೆಯಡಿ 1,549 ಸಹಕಾರ ಸಂಘಗಳು ಯೋಜನೆಯ ಲಾಭ ಪಡೆಯಲಿವೆ’ ಎಂದೂ ವಿವರಿಸಿದರು.

‘ರಾಜ್ಯದಲ್ಲಿ 45 ಸಾವಿರ ಸಹಕಾರ ಸಂಘಗಳಿವೆ. ಅದರಲ್ಲಿ 2.30 ಕೋಟಿ ಸದಸ್ಯರಿದ್ದಾರೆ. ಕೊರೊನಾ ಕಾರಣದಿಂದ ಕುಸಿದಿದ್ದ ಆರ್ಥಿಕ ಸ್ಥಿತಿ ಮತ್ತೆ ಚೇತರಿಕೆ ಕಾಣುತ್ತಿದೆ. ಸಹಕಾರ ಇಲಾಖೆ ₹ 53 ಕೋಟಿ ಮೊತ್ತವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದೆ’ ಎಂದರು.

ಕೆಎಂಎಫ್‌ ನಿರ್ದೇಶಕ, ಶಾಸಕ ಎಚ್‌.ಡಿ. ರೇವಣ್ಣ, ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ, ವಿಧಾನಪರಿತ್‌ನ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಸೇರಿ ಒಟ್ಟು 29 ಸಾಧಕರಿಗೆ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಂದಾಯ ಸಚಿವ ಆರ್. ಅಶೋಕ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಮಹಾಮಂಡಳ ಕಾರ್ಯಚಟುವಟಿಕೆಯ ಕೈಪಿಡಿ ಮತ್ತು ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಇದ್ದರು.

‘ವಿವಿಧ ಜಿಲ್ಲೆಗಳಲ್ಲಿ ಸಪ್ತಾಹ’

‘ಸಹಕಾರ ಕ್ಷೇತ್ರವನ್ನು ವಿಸ್ತರಿಸಲು ಈ ಸಪ್ತಾಹ ಸಹಾಯವಾಗಲಿದೆ. ಏಳು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ವಿಷಯಗಳನ್ನು ಆಧರಿಸಿ ಪ್ರತಿದಿನ ಆಚರಿಸಲಾಗುವುದು. ಶನಿವಾರದ ವಿಷಯ ‘ಕೊರೊನೋತ್ತರ ಕಾಲದಲ್ಲಿ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

‘ಆತ್ಮ ನಿರ್ಭರ ಯೋಜನೆಯಡಿ ರಾಜ್ಯದ ದುರ್ಬಲರನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ಉದ್ದೇಶಿಸಲಾಗಿದೆ. ಸಹಕಾರ ಸಂಸ್ಥೆಗಳ ಮೂಲಕ ವಿವಿಧ ಕ್ಷೇತ್ರಗಳ 15 ಲಕ್ಷ ಜನರಿಗೆ ₹ 15 ಸಾವಿರ ಕೋಟಿ ಸಾಲ ನೀಡಲು ಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT