ಭಾನುವಾರ, ನವೆಂಬರ್ 29, 2020
21 °C

ವಿಜಯೇಂದ್ರ ಉತ್ತರಾಧಿಕಾರಿಯಾದರೆ ಸ್ವಾಗತ: ಆಯನೂರು ಮಂಜುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯನೂರು ಮಂಜುನಾಥ್‌

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷ ಬಿಂಬಿಸಿದರೆ ಸ್ವಾಗತಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

‘ಕೆ.ಆರ್. ಪೇಟೆ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿಂದೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಎಲ್ಲ ಮುಖಂಡರ ಶ್ರಮವಿದೆ. ಹೊಸ ನಾಯಕತ್ವದಿಂದ ಸಂಘಟನೆಗೆ ಜೀವ ಬರುತ್ತದೆ ಎಂಬುದಕ್ಕೆ ವಿಜಯೇಂದ್ರ ಅವರೇ ನಿದರ್ಶನ. ಚುನಾವಣಾ ಪ್ರಚಾರದಲ್ಲಿ ವಿಜಯೇಂದ್ರ ಅವರೇ ಎದ್ದು ಕಾಣುತ್ತಿದ್ದರು’ ಎಂದು ಶ್ಲಾಘಿಸಿದರು.

ಯತ್ನಾಳ್‌ಗೆ ತಿರುಗೇಟು: ಮುಖ್ಯಮಂತ್ರಿ ವಿರುದ್ಧ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ. ದೊಡ್ಡ ಸಂಗೀತ ಸಭೆಯಲ್ಲಿ ಅಪಸ್ವರವೇ ಎದ್ದು ಕಾಣುವಂತೆ ಯತ್ನಾಳ್ ಮಾತು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಆಯನೂರು ಮಂಜುನಾಥ್‌ ವಿಶ್ಲೇಷಿಸಿದರು.

‘ಕಾಯಿಲೆ ಬಂದ ವ್ಯಕ್ತಿಗೆ ಆಪರೇಷನ್ ಮಾಡುವ ಮೊದಲು ಔಷಧ ಕೊಟ್ಟು ನೋಡ್ತಾರೆ. ವಾಸಿ ಆಗದಿದ್ದರೆ ಆಪರೇಷನ್ ಮಾಡ್ತಾರೆ. ಆಪರೇಷನ್ ಮಾಡಲಿಲ್ಲ ಅಂದ್ರೆ ಆ ಕಾಯಿಲೆ ಮುಂದುವರಿಯುತ್ತದೆ’ ಎನ್ನುವ ಮೂಲಕ ಪಕ್ಷವು ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಸೂಚ್ಯವಾಗಿ ಹೇಳಿದರು.

ಅತಿಥಿ ಉಪನ್ಯಾಸಕರ ಗೌರವಧನ ಬಿಡುಗಡೆ

ಶಿವಮೊಗ್ಗ: ಸರ್ಕಾರ ದೀಪಾವಳಿ ಹಬ್ಬಕ್ಕೂ ಮೊದಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ಬಿಡುಗಡೆ ಮಾಡಿದೆ. ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪರವಾಗಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ ಅಭಿನಂದಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

‘ಕೊರೊನಾ ಅವಧಿಯಲ್ಲಿ ಕಾಲೇಜುಗಳು ನಡೆದಿರಲಿಲ್ಲ. ಇದರಿಂದ ಅತಿಥಿ ಉಪನ್ಯಾಸಕರು ಸಂಕಷ್ಟ ಅನುಭವಿಸಿದ್ದರು. ಸೆಪ್ಟಂಬರ್‌ನಲ್ಲಿ ನಡೆದ ವಿಧಾನಮಂಡಲದ ಅಧಿವೇಶದಲ್ಲಿ ವೇತನ ಬಿಡುಗಡೆಗಾಗಿ ಸದನದಲ್ಲೇ ಹೋರಾಟ ನಡೆಸಿದ್ದೆ. ಉನ್ನತ ಶಿಕ್ಷಣ ಸಚಿವರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಅಧಿವೇಶನಕ್ಕೆ ಗೈರಾಗಿದ್ದರು. ಸತಃ ಮುಖ್ಯಮಂತ್ರಿಯೇ ವಿಧಾನ ಪರಿಷತ್‌ಗೆ ಬಂದು ಮಾಹಿತಿ ಪಡೆದಿದ್ದರು. ವೇತನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಈಗ ನೀಡಿದ ಭರವಸೆಯಂತೆ ವೇತನ ನೀಡಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳ ಗೌರವಧನ ಬರಬೇಕಿತ್ತು. ಆದರೆ,ಯಡಿಯೂರಪ್ಪ ಅವರು 5 ತಿಂಗಳ ವೇತನ ಮಂಜೂರು ಮಾಡುವ ಮೂಲಕ ದೀಪಾವಳಿ ಕೊಡುಗೆ ನೀಡಿದ್ದಾರೆ. 14,447 ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ 5 ತಿಂಗಳ ಗೌರವಧನವಾದ ₹ 85.92 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ವಿಧಾನ ಪರಿಷತ್ ಕಲಾಪ: ಸರ್ಕಾರದ ವಿರುದ್ಧ ಧರಣಿ ಆರಂಭಿಸಿದ ಆಯನೂರು ಮಂಜುನಾಥ್

ಮುಂದಿನ ದಿನಗಳಲ್ಲಿ ಅತಿಥಿ ಉಪನ್ಯಾಸಕರ ಸೇವಾಭದ್ರತೆ ಹಾಗೂ ಇತರೆ ಸಮಸ್ಯೆಗಳತ್ತ ಗಮನ ಹರಿಸಲಾಗುವುದು.  ವೇತನ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಪಿಯು ಉಪನ್ಯಾಸಕರ ಸಮಸ್ಯೆಯನ್ನೂ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ತರಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಸಿ.ಟಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷೆ ಡಾ.ಹೇಮಲತಾ, ಕಾರ್ಯದರ್ಶಿ ವಿಶ್ವ ಕುಮಾರ್, ಸರೈಯಾ, ಪ್ರವೀಣ್ ಕುಮಾರ್, ಚಂದ್ರಪ್ಪ, ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು